`ವಾಡಿಕೆಗಿಂತ ಹೆಚ್ಚಿನ ಮಳೆಯಾದ ಕಡೆ ಅಡಿಕೆ ( Areca ) ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು\’ ಎಂದು ಕುಮಟಾದ ಜನಪರ ವೇದಿಕೆ ಹಾಗೂ ಭಾರತ ಕೃಷಿಕ ಸದನ ಸಂಘಟನೆಯವರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಪತ್ರ ರವಾನಿಸಿದ್ದಾರೆ.
`ನಿರಂತರ ಮಳೆಯಿಂದಾಗಿ ರೈತರ ಮುಖ್ಯ ಬೆಳೆಯಾದ ಅಡಿಕೆ ( Areca ) ಮತ್ತು ಕಾಳುಮೆಣಸು ( Pepper )ಬೆಳೆ ಹಾನಿಯಾಗಿದೆ. ಇದರಿಂದ ರೈತರ ಬದುಕು ದುಸ್ತರವಾಗಿದ್ದು, ಇದಕ್ಕೆ ಪರಿಹಾರ ಅಗತ್ಯ ಎಂದು ಜನಪರ ವೇದಿಕೆ ಅಧ್ಯಕ್ಷ ಎಂ.ಜಿ.ಭಟ್ಟ ಒತ್ತಾಯಿಸಿದರು. ಈ ಹಿಂದೆ ಮೈಲು ತುತ್ತಕ್ಕೆ ಸರ್ಕಾರದಿಂದ ಸಹಾಯಧನ ಸಿಗುತ್ತಿತ್ತು. ಅದು ಇದೀಗ ಸಿಗುತ್ತಿಲ್ಲ\’ ಎಂದು ಕೃಷಿ ಸದನದ ಅಧ್ಯಕ್ಷ ಪ್ರದೀಪ ಹೆಗಡೆ ವಿವರಿಸಿದರು.
`ದೀರ್ಘಾವಧಿಯ ಬೆಳೆಗಳನ್ನು ಪಹಣಿ ಪತ್ರಿಕೆಯಲ್ಲಿ ಪದೇ ಪದೇ ಬದಲಾಯಿಸುವದರಿಂದ ರೈತರಿಗೆ ಬೆಳೆಸಾಲ ಪಡೆಯುವಾಗ ಸಮಸ್ಯೆಯಾಗುತ್ತಿದೆ\’ ಎಂದು ಹೇಳಿದರು. `ಸಾಂಪ್ರದಾಯಿಕ ಬೆಳೆ ಅಡಿಕೆ ( Areca ) ಆಗಿರುವುದರಿಂದ ಅದನ್ನು ನಿಯಂತ್ರಣಕ್ಕೆ ಒಳಪಡಿಸಿ ಮಿತಿಮೀರಿದ ವಿಸ್ತರಣೆಗೆ ಕಡಿವಾಣ ಹಾಕಬೇಕು, ಬೆಳೆ ಪರಿಹಾರ, ರೈತರಿಗೆ ಆದ ಹಾನಿ ಮುಂತಾದ ಪರಿಹಾರ ನೀಡುವಾಗ ಕಾಲಮಾನಕ್ಕೆ ತಕ್ಕಂತೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು\’ ಎಂದು ಆಗ್ರಹಿಸಿದರು.
ಪ್ರಮುಖರಾದ ಸುಬ್ರಹ್ಮಣ್ಯ ಹೆಗಡೆ, ಸಿ.ಜಿ.ಹೆಗಡೆ, ಟಿ.ವಿ.ಹೆಗಡೆ, ಕೇಶವ ಗೌಡ, ಉದಯ ಹರಿಕಾಂತ, ವಿನಾಯಕ ನಾಯ್ಕ, ಮಹೇಶ ಮಡಿವಾಳ ಇತರರು ಕಾಡುಪ್ರಾಣಿ ಹಾವಳಿಯ ಬಗ್ಗೆಯೂ ದೂರಿದರು.