ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ, ಕರಾವಳಿಯ ಪ್ರಭಾವಿ ಮುಖಂಡರಾಗಿದ್ದ ಕಾರವಾರದ ರಾಜು ತಾಂಡೇಲ್ ( Fisherman ) ಸೋಮವಾರ ರಾತ್ರಿ ತಮ್ಮ 55ನೇ ವಯಸ್ಸಿನಲ್ಲಿ ದಿಢೀರ್ ಹೃದಯಘಾತದಿಂದ ನಿಧನರಾಗಿದ್ದಾರೆ.
ಬಡತನದಲ್ಲಿ ಜನಿಸಿದ್ದ ಅವರು ಮೊದಲು ಮೀನುಗಾರಿಕೆ ನಡೆಸುತ್ತಿದ್ದರು. ನಂತರ ಮೀನು ಉದ್ಯಮಿಯಾಗಿ ಬೆಳೆಯುತ್ತ ಉತ್ತರಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾಗಿದ್ದರು. ರಾಜಕೀಯವಾಗಿ ಸಾಕಷ್ಟು ಪ್ರಭಾವಹೊಂದಿದ್ದ ಚಿತ್ತಾಕುಲ ಗ್ರಾಮ ಪಂಚಾಯತ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು. ಕಾರವಾರದ ಸಾಗರಮಾಲಾ ಯೋಜನೆ, ಹೊನ್ನಾವರದ ಬಂದರು ಯೋಜನೆಗೆ ಮೀನುಗಾರರು ವಿರೋಧಿಸಿದಾಗ ರಾಜು ತಾಂಡೇಲ್ ಹೋರಾಟಗಾರರ ಜೊತೆಯಿದ್ದರು. ಸದಾ ಮೀನುಗಾರರ ಧ್ವನಿಯಾಗಿದ್ದರು.
ಮಂಗಳವಾರ ರಾಜು ತಾಂಡೇಲ್ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಸೈಲ್, ವಿಪ ಸದಸ್ಯ ಗಣಪತಿ ಉಳ್ವೇಕರ್, ಮಾಜಿ ಸಚಿವ ಆನಂದ ಅಸ್ನೋಟಿಕರ್ ಸೇರಿ ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅವರ ಅಪಾರ ಅಭಿಮಾನಿಗಳು, ಮೀನುಗಾರ ಮುಖಂಡರು ಅಂತಿಮ ಯಾತ್ರೆಯಲ್ಲಿದ್ದರು.
ಹಲವರಿಂದ ಸಂತಾಪ:
ರಾಜು ತಾಂಡೇಲ್ ನಿಧನಕ್ಕೆ ಮೀನು ಮಾರುಕಟ್ಟೆ ಬಂದ್ ಮಾಡಿ ಮಹಿಳೆಯರು ಸಂತಾಪ ಸೂಚಿಸಿದ್ದಾರೆ. ಕಾರವಾರದ ಮೀನುಗಾರಿಕೆ ಬಂದರಿನಲ್ಲಿ ಯಾಂತ್ರಿಕ ದೋಣಿಗಳ ಸಂಚಾರವೂ ಬಂದಾಗಿದೆ. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಿಲೀಪ ಅರ್ಗೆಕರ್ ಸೇರಿ ಅನೇಕರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.