ಶಿರಸಿ: `ದೇವರ ಇಚ್ಚೆ ಹಾಗೂ ಅದೃಷ್ಟದ ನಡುವೆ ಸನ್ಮಾರ್ಗದಲ್ಲಿ ಮುನ್ನೆಡೆಯುವ ಪ್ರಯತ್ನ ಸಾಧನೆಗೆ ಪೂರಕ\’ ಎಂದು ಸೋಂದಾ ಸ್ವರ್ಣವಲ್ಲಿ ( Swarnavalli ) ಸಂಸ್ಥಾನದ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಕಿಸಲವಾಡ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು `ಮನುಷ್ಯನ ಜೀವನ ಎನ್ನುವುದು ಒಂದು ರೀತಿಯಲ್ಲಿ ಹೋಯ್ದಾಟ. ನಮ್ಮ ಪ್ರಯತ್ನ, ಈಶ್ವರ ಇಚ್ಛೆ, ಅದೃಷ್ಟ ಇದು ಮೂರು ಎಲ್ಲರ ಜೀವನದಲ್ಲಿಯೂ ಕಚ್ಚಾಟ ನಡೆಸುತ್ತವೆ. ಈ ಮೂವರ ಪೈಕಿ ಪುರುಷ ಪ್ರಯತ್ನ ಎನ್ನುವುದು ಸನ್ಮಾರ್ಗದಲ್ಲಿ ನಡೆದರೆ ಅದಕ್ಕೆ ಹೆಚ್ಚಿಗೆ ಬಲ ಬರಲು ಸಾಧ್ಯವಿದೆ\’ ಎಂದರು. (Swarnavalli)
`ಪುರುಷ ಪ್ರಯತ್ನಕ್ಕೆ ಹೆಚ್ಚು ಬಲ ಕೊಡುವ ಮೂಲಕ ಇಹ – ಪರದ ಸಾಧನೆಯಲ್ಲಿ ತೊಡಗಬೇಕು. ಪ್ರಯತ್ನಕ್ಕೆ ನಮ್ಮ ಅದೃಷ್ಟ ಒಮ್ಮೊಮ್ಮೆ ಅಡ್ಡಿಯಾಗುವ ಸಾಧ್ಯತೆಯಿರುತ್ತದೆ. ಆದರೂ ಕೂಡ ಪುರುಷ ಪ್ರಯತ್ನದಿಂದ ಅದನ್ನು ದಾಟಬೇಕು. ಹಾಗೆಯೇ ಪರದ ಪ್ರಯತ್ನ. ಪರಲೋಕಿಕವಾಗಿ ಹೆಚ್ಚಿನ ಸಾಧನೆ ಮಾಡುವುದಕ್ಕೋಸ್ಕರ ನಾವು ಮನುಷ್ಯರಾಗಿ ಬಂದಿದ್ದೇವೆ\’ ಎಂದರು.
`ಆಧ್ಯಾತ್ಮಿಕ ಸಾಧನೆಯ ಕ್ಷೇತ್ರದಲ್ಲೂ ತೊಡಕುಗಳು ಇರುತ್ತವೆ. ಕರ್ತವ್ಯಗಳ ತೊಡಕುಗಳು, ದುರದೃಷ್ಟಗಳ ತೊಡಕುಗಳು ಬರುತ್ತವೆ. ಇವುಗಳೆಲ್ಲ ನಮ್ಮ ಹಿಂದಿನ ಜನ್ಮದ ಅದೃಷ್ಟಗಳ ಕಾರಣದಿಂದ ಬರುತ್ತವೆ. ಇಲ್ಲವೋ ದೈವ ಇಚ್ಚೆಯಿಂದ ಬರುತ್ತದೆ. ಅವುಗಳನ್ನು ತೀವ್ರವಾದ ಪುರುಷ ಪ್ರಯತ್ನದ ಮೂಲಕ ದಾಟಲು ಸಾಧ್ಯವಿದೆ\’ ಎಂದರು.
`ಭಗವದ್ಗೀತೆಯ0ತಹ ಗ್ರಂಥಗಳ ಚಿಂತನೆ ನಿತ್ಯವೂ ಆಗಬೇಕು. ಏನೇನೋ ಕೆಲಸಗಳು, ಅಡ್ಡಿಗಳು ಬರುತ್ತವೆ. ಏನೇ ಬಂದರು ಗಟ್ಟಿಯಾಗಿ ಕೂತು ಚಿಂತನೆಯನ್ನು ಮಾಡಬೇಕು. ಮನುಷ್ಯ ಶರೀರವು ಅತ್ಯಂತ ಮಹತ್ವದ್ದು. ಇದನ್ನು ನಾವು ಸಂಸಾರವೆ0ಬ ಮಹಾ ಸಮುದ್ರವನ್ನು ದಾಟಲು ಬಳಸಿಕೊಳ್ಳಬೇಕು. ಶರೀರ ಎಂಬ ಈ ನೌಕೆ ಎಷ್ಟೊತ್ತಿಗೆ ಒಡೆದು ಹೋಗುತ್ತದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಒಡೆದು ಹೋಗುವ ಪೂರ್ವದಲ್ಲೇ ಸಂಸಾರವೆ0ಬ ಸಮುದ್ರವನ್ನು ದಾಟಿಬಿಡೇಬೇಕು\’ ಎಂದರು.