ಕಾರು ಚಾಲಕನಾಗಿ ಕೆಲಸ ಮಾಡುವ ಬಾಬಲಿ ಗುಂಡಿ ಚಾಮರ (52) ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹೋಗಿ 1.90 ಲಕ್ಷ ರೂ (Cheating) ಕಳೆದುಕೊಂಡಿದ್ದಾರೆ.
ಜೊಯಿಡಾದ ರಾಮನಗರದಲ್ಲಿ ಬಾಬಲಿ ಅವರು ಓಡಿಸುತ್ತಿದ್ದ ಕಾರು ಪದೇ ಪದೇ ಹಾಳಾಗುತ್ತಿದ್ದು ಅವರು ಬೇರೆ ಕಾರು ಖರೀದಿಸುವ ಯೋಚನೆಯಲ್ಲಿದ್ದರು. ಹೀಗಾಗಿ ಅಗಸ್ಟ 10ರಂದು ದಾಂಡೇಲಿಯ ವನಶ್ರೀ ನಗರದ ಅಭಿಷೇಕ ಜಯರಾಂ ಮಾಜಾಳಿಕರ್ (Cheating) ಎಂಬಾತರನ್ನು ಭೇಟಿ ಮಾಡಿ ಅವರಲ್ಲಿದ್ದ ಟಾಟಾ ಜಸ್ಟ್ ಕಂಪನಿಯ ಕಾರು ಖರೀದಿಯ ಮಾತುಕತೆ ನಡೆಸಿದ್ದರು. ಆಗ `ಸಾಲ ಬಾಕಿ ಹಿನ್ನಲೆ ತನ್ನ ಕಾರು ಶಿರಸಿಯ ಬ್ಯಾಂಕಿನಲ್ಲಿದ್ದು, 3.50 ಲಕ್ಷ ನೀಡಿದಲ್ಲಿ ವಾಹನ ಬಿಡಿಸಿಕೊಡುವೆ\’ ಎಂದು ಅಭಿಷೇಕ್ ಭರವಸೆ ನೀಡಿದ್ದರು. ಹೀಗಾಗಿ 3.50 ಲಕ್ಷ ರೂಪಾಯಿಗೆ ಕಾರು ಮಾರಾಟದ ಹೊಂದಾಣಿಕೆ ನಡೆದಿದ್ದು, ಬಾಬಲಿ ಚಾಮರ ಸಹ ಈ ಹಣ ನೀಡಲು ಒಪ್ಪಿಕೊಂಡಿದ್ದರು.
ಮಾತುಕಥೆ ನಡೆದ ಪ್ರಕಾರ ಮುಂಗಡ ಹಣ 1.90 ಲಕ್ಷ ನೀಡುವಂತೆ ಅಭಿಷೇಕ್ ಕೇಳಿದ್ದು, ಆಗ ಕೈಯಲ್ಲಿದ್ದ 10 ಸಾವಿರ ರೂ ನೀಡಿದ್ದರು. `ಉಳಿದ ಹಣವನ್ನು ತನ್ನ ಪತ್ನಿ ಸೋನಾಲಿ ಖಾತೆಗೆ ಹಾಕು\’ ಎಂದು ಅಭಿಷೇಕ್ ತಾಕೀತು ಮಾಡಿದ್ದರು. ಅದರ ಪ್ರಕಾರ ಸೋನಾಲಿ ಸಹ ಫೋನ್ ಮಾಡಿ ಬ್ಯಾಂಕ್ ಖಾತೆ ವಿವರ ವಾಟ್ಸಪ್ ಮಾಡಿದ್ದು, ಅದಾದ ನಂತರ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ವಿನಾಯಕ ಎಂಬಾತ ಫೋನ್ ಮಾಡಿ ಬೇಗ ಹಣ ಹಾಕಿದಲ್ಲಿ ಕಾರು ಬಿಡುಗಡೆ ಮಾಡುವೆ ಎಂದಿದ್ದನು.
ಒಳ್ಳೆಯ ಕಾರು ಬಿಟ್ಟುಕೊಳ್ಳಬಾರದು ಎಂದು ರಾಮನಗರದ ಕೆಡಿಸಿಸಿ ಬ್ಯಾಂಕಿಗೆ ಅಗಸ್ಟ 12ರಂದು ಬ್ಯಾಂಕಿಗೆ ಓಡೋಡಿ ಹೋದ ಬಾಬುಲಿ ತನ್ನ ಖಾತೆಯಿಂದ 1.50 ಲಕ್ಷ ರೂಪಾಯಿಯನ್ನು ಸೋನಾಲಿ ಖಾತೆಗೆ ಜಮಾ ಮಾಡಿದ್ದು, ನಂತರ ಮತ್ತಷ್ಟು ಹಣವನ್ನು ಆಕೆಯ ಖಾತೆಗೆ ವರ್ಗಾಯಿಸಿದ್ದರು.
ಒಟ್ಟು 1.90 ಲಕ್ಷ ರೂ ಸಿಕ್ಕ ನಂತರ ಅಭಿಷೇಕ್ ಹಾಗೂ ಸೋನಾಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ದಂಪತಿ ರಾಮನಗರದಲ್ಲಿ ವಾಸವಾಗಿದ್ದ ಮನೆಗೆ ಹೋಗಿ ನೋಡಿದರೆ ಬೀಗ ಹಾಕಿಕೊಂಡಿದೆ. ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಮಾಡಿದ ವಿನಾಯಕನಿಗೆ ಫೋನ್ ಮಾಡಿದಾಗ ಆತ ಬ್ಯಾಂಕ್ ನೌಕರನೇ ಅಲ್ಲ ಎಂದು ಗೊತ್ತಾಗಿದೆ.
ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಮಾಡಿದ್ದ ವಿನಾಯಕ ದಾಂಡೇಲಿ ಪೆಪರ್ ಮಿಲ್ಲಿನ ನೌಕರ! ಆತ ಇದೀಗ `ತನಗೇನು ಗೊತ್ತಿಲ್ಲ. ನಾನೇನು ಮಾಡಿಲ್ಲ\’ ಎನ್ನುತ್ತಿದ್ದು, ಹಣ ಕಳೆದುಕೊಂಡು ಕಾರು ಸಿಗದ ಬಾಬಲಿ ಪೊಲೀಸ್ ದೂರು ನೀಡಿದ್ದಾರೆ.