ಜೊಯಿಡಾ: ಯರುಮುಖದ ಮಹೇಶ ದೇವಿದಾಸ ಕುರ್ಡೇಕರ್ ಹಾಗೂ ಜ್ಞಾನೇಶ ಶ್ರೀಕಾಂತ ಗಾವಡೆ ನಡುವೆ ಹೊಡೆದಾಟ ನಡೆದಿದ್ದು, ಇದನ್ನು ನೋಡಿದ ಸಿದ್ದಿ ಹುಡುಗರಿಬ್ಬರು ಅದನ್ನು ತಪ್ಪಿಸಿದ್ದಾರೆ.
ಅಗಸ್ಟ 26ರಂದು ಯರುಮುಖದ ಮಹೇಶ್ ಕುರ್ಡೇಕರ್ ಹಳಿಯಾಳಕ್ಕೆ ಹೋಗಿದ್ದರು. ಸಂಜೆ ಅಲ್ಲಿಂದ ದಾಂಡೇಲಿ ಮಾರ್ಗವಾಗಿ ಮರಳಲು ದಾಂಡೇಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಯರುಮುಖದ ಜ್ಞಾನೇಶ್ ಗಾವಡೆ ಅವರಲ್ಲಿ ಬಂದು ಮಾತನಾಡಿಸಿದ್ದು, ಯರುಮುಖಕ್ಕೆ ತೆರಳುವ ಬಸ್ ಬಂದ ಕಾರಣ ಮಹೇಶ್ ಬಸ್ ಏರಿದರು. ಜ್ಞಾನೇಶ್ ಸಹ ಅವರ ಹಿಂದೆ ಬಸ್ ಹತ್ತಿ ಹಿಂದಿನ ಸೀಟಿನಲ್ಲಿಯೇ ಕುಳಿತಿದ್ದು ಬಸ್ ಯರುಮುಖ ತಲುಪಿದಾಗ ಇಬ್ಬರು ಇಳಿದಿದ್ದರು.
ಬಸ್ಸಿನಿಂದ ಮೊದಲು ಇಳಿದ ಮಹೇಶ್ ಕುರ್ಡೇಕರ್ ಮನೆ ಕಡೆ ನಡೆದು ಹೋಗುತ್ತಿದ್ದಾಗ ಹಿಂದಿನಿ0ದ ಬಂದು ಅಡ್ಡಗಟ್ಟಿದ ಜ್ಞಾನೇಶ ಗಾವಡೆ ಮೊದಲು ಕೆಟ್ಟದಾಗಿ ಬೈದಿದ್ದು, ಇದನ್ನು ಮಹೇಶ್ ವಿರೋಧಿಸಿದರು. ಆಗ ಜ್ಞಾನೇಶ್, ಮಹೇಶ್ ಕೆನ್ನೆಗೆ ಹೊಡೆದಿದ್ದು ಇಬ್ಬರ ನಡುವಿನ ಜಗಳ ತಾರಕಕ್ಕೆರಿತು. ಜ್ಞಾನೇಶ್ ಮುಷ್ಟಿಕಟ್ಟಿ ಮಹೇಶರ ಎದೆ, ಕೈ-ಕಾಲಿಗೆ ಹೊಡೆದು ನೆಲಕ್ಕೆ ಬೀಳಿಸಿದರು.
ಇದನ್ನು ನೋಡುತ್ತಿದ್ದ ಪರಮೇಶ್ವರ ಸಿದ್ದಿ ಹಾಗೂ ಲಕ್ಷ್ಮಣ ಸಿದ್ದಿ ತಕ್ಷಣ ಅಲ್ಲಿಗೆ ದಾವಿಸಿ ಜಗಳ ಬಿಡಿಸಿದರು. ಹೊಡೆದಾಟ ನಡೆಸುತ್ತಿದ್ದವರನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಿದರು. ಅದಾಗಿಯೂ ಜ್ಞಾನೇಶ್, ಮಹೇಶ್\’ಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಮಹೇಶ್ ಕುರ್ಡೇಕರ್ ಅವರ ಚಿಕ್ಕಪ್ಪನ ಮಗಳನ್ನು ಜ್ಞಾನೇಶ ಗಾವಡೆ ಪ್ರೀತಿಸುತ್ತಿದ್ದು, ಎರಡು ವರ್ಷದ ಹಿಂದೆ ಆತನಿಗೆ ಎಲ್ಲರೂ ಸೇರಿ ಎಚ್ಚರಿಕೆ ನೀಡಿದ್ದರು. ಇದೇ ದ್ವೇಷದ ಹಿನ್ನಲೆ ಆತ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹೇಶ್ ಕುರ್ಡೇಕರ್ ದೂರಿದ್ದಾರೆ.