ಶಿರಸಿ: ಅಂಕೋಲಾ ತಾಲೂಕಿನ ಹಿಲ್ಲೂರಿನಿಂದ 4 ಆಕಳು ಹಾಗೂ 3 ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಶಿರಸಿ ಪೊಲೀಸರು ಹಿಡಿದಿದ್ದಾರೆ.
ಅಗಸ್ಟ 27ರ ಸಂಜೆ ಹಿಲ್ಲೂರಿನ ನಾಗರಾಜ ಹೇಮಣ್ಣ ನಾಯಕ, ಶ್ರವಣ ರಘುವೀರ ಗಾಂವ್ಕರ ಹಾಗೂ ಹಾವೇರಿಯ ಮಂಜಪ್ಪ ಬೆಂಚಳ್ಳಿ, ಸುದೀಪ ಬೂಚಳ್ಳಿ ಸೇರಿಕೊಂಡು ಜಾನುವಾರು ಸಾಗಾಟ ಮಾಡುತ್ತಿದ್ದರು. ಜಾನುವಾರುಗಳಿಗೆ ಯಾವುದೇ ಆಹಾರ-ನೀರು ನೀಡದೇ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿದ್ದರು. ಶಿರಸಿಯಿಂದ ಹಾನಗಲ್ ಮಾರ್ಗವಾಗಿ ಅವರು ಸಂಚರಿಸುತ್ತಿದ್ದಾಗ ದೇವನಹಳ್ಳಿಯಲ್ಲಿ ಪೊಲೀಸರು ವಾಹನವನ್ನು ಅಡ್ಡ ಹಾಕಿದರು.
ಟಾಟಾ ಕಂಪನಿಯ 407 ವಾಹನದಲ್ಲಿ ಮಲಗಲು ಸಹ ಜಾಗ ಇಲ್ಲದ ರೀತಿ ಜಾನುವಾರುಗಳನ್ನು ತುಂಬಲಾಗಿತ್ತು. ಪಿಎಸ್ಐ ದಯಾನಂದ ಕೆ ಜೋಗಳೆಕರ್ ತಕ್ಷಣ ಆರೋಪಿತರನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ಬಿಡುಗಡೆ ಮಾಡಿದರು.