ಕಾರವಾರ: ಮೀನುಗಾರ ಮುಖಂಡ ರಾಜು ತಾಂಡೇಲ್ ಅವರ ನೆನಪನ್ನು ಶಾಶ್ವತವಾಗಿರಿಸಲು ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದಿ0ದ ಶ್ರೀಗಂಧದ ಗಿಡ ನೆಡಲಾಗಿದೆ.
ಬುಧವಾರ ಕಾರವಾರ ಕಡಲತೀರದ ಅಂಚಿನಲ್ಲಿ ಅವರ `ರಾಜು ತಾಂಡೇಲ್ ನುಡಿನಮನ\’ ಕಾಯಕ್ರಮ ನಡೆದಿದ್ದು, ಹಲವು ಗಣ್ಯರು ಭಾಗವಹಿಸಿ ಸಂತಾಪ ಸೂಚಿಸಿದರು. `ರಾಜಕೀಯ ಹೊರತಾಗಿಯೂ ಎಲ್ಲರೊಂದಿಗೆ ಬೆರೆಯುತ್ತಿದ್ದ ರಾಜು ತಾಂಡೇಲ್ ಅವರ ಸೇವಾ ಮನೋಭಾವನೆ ಎಲ್ಲರಿಗೂ ಮಾದರಿ. ಅವರ ಅಕಾಲಿಕ ನಿಧನ ಸಮಸ್ತ ಮೀನುಗಾರ ಸಮುದಾಯಕ್ಕೆ ದೊಡ್ಡ ನಷ್ಟ\’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ರಾಜು ತಾಂಡೇಲ್ ಹೋರಾಟದ ಬಗ್ಗೆ ಗಣಪತಿ ಮಾಂಗ್ರೆ ವಿವರಿಸಿದರು. ಸಮಾಜದ ಕಷ್ಟಕ್ಕೆ ರಾಜು ತಾಂಡೇಲ್ ಸ್ಪಂದಿಸುತ್ತಿದ್ದ ರೀತಿಯ ಬಗ್ಗೆ ಚೈತ್ರಾ ಕೊಠಾರಕರ ಮಾತನಾಡಿದರು. ನಿವೃತ್ತ ಶಿಕ್ಷಕ ಪಿ ಎಸ್ ರಾಣೆ ಸಾಹಿತ್ಯ ನಿದರ್ಶನಗಳ ಮೂಲಕ ಅವರ ಸಹಾಯ ಸ್ಮರಿಸಿದರು.
ದೇವಿದಾಸ ನಾಯ್ಕ, ಹರಿಹರ ಹರಿಕಂತ್ರ, ನಾಗೇಶ ಕುರ್ಡೆಕರ, ಸುಭಾಸ್ ಗುನಗಿ, ಎಂ ಗೋವಿಂದ ಮೊದಲಾದವರು ರಾಜು ತಾಂಡೇಲ ಅವರ ಉಪಕಾರ ಗುಣಗಳನ್ನು ಸ್ಮರಿಸಿದರು. ನಗರ ಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ನಗರಸಭಾ ಸದಸ್ಯ ಹನುಮಂತ ತಳವಾರ, ಬಾಬು ಶೇಕ್, ಕಸಾಪ ಅಧ್ಯಕ್ಷ ರಾಮ ನಾಯ್ಕ ಇತರರು ಮಾತನಾಡಿದರು.
ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್, ಅಧ್ಯಕ್ಷ ರೋಷನ್ ಹರಿಕಂತ್ರ, ಸಂಘದ ಪ್ರಮುಖರಾದ ರೋಷನ್ ತಾಂಡೇಲ್, ಸುನೀಲ್ ತಾಂಡೇಲ್, ಸಚಿನ್ ಹರಿಕಂತ್ರ, ನಂದೀಶ್ ಮಾಜಾಳಿಕಾರ, ಕೃಷ್ಣಾ ತಾಂಡೇಲ್, ಪ್ರವೀಣ ತಾಂಡೇಲ್, ವಿನಾಯಕ ಖಾರ್ವಿ, ವಿಠೋಬಾ ತಾಂಡೇಲ್ ಭಾಗವಹಿಸಿ ಶೃದ್ದಾಂಜಲಿ ಸಲ್ಲಿಸಿದರು.