ಕುಮಟಾ: ಹೆಗಡೆಯ ಗ್ರಾಮೀಣ ಪ್ರದೇಶಗಳಲ್ಲಿ ಗೋವುಗಳನ್ನು ಕದಿಯುತ್ತಿದ್ದ ಕಳ್ಳರ ಚಹರೆ ಪತ್ತೆಯಾಗಿದೆ. ರಾತ್ರಿ ಕಾರಿನಲ್ಲಿ ಬರುವ ಕಳ್ಳರು ಗೋವನ್ನು ತನ್ನ ವಾಹನದಲ್ಲಿ ತುಂಬಿಕೊoಡು ಪರಾರಿಯಾಗುವ ಸಿಸಿ ಕ್ಯಾಮರಾ ಕಣ್ಣಿಗೆ ದೃಶ್ಯ ಸೆರೆಯಾಗಿದೆ.
ಈಚೆಗೆ ಗ್ರಾಮೀಣ ಪ್ರದೇಶದಲ್ಲಿ ಹಸುಗಳನ್ನು ಕದಿಯುವವರ ಸಂಖ್ಯೆ ಹೆಚ್ಚಳವಾಗಿದೆ. ಜನ ಮಲಗಿದ ಮೇಲೆ ಬರುವ ಕಳ್ಳರು ರಸ್ತೆ ಅಂಚಿನಲ್ಲಿರುವ ಆಕಳುಗಳನ್ನು ಕದ್ದು ಸಾಗಿಸುತ್ತಿದ್ದಾರೆ. ಹೆಗಡೆಯ ಶಾಂತಿಕಾoಬ ದೇವಸ್ಥಾನ, ಹಳಗೇರಿ, ಗುನಗನಕೊಪ್ಪ ಮೊದಲಾದ ಪ್ರದೇಶದಲ್ಲಿದ್ದ ಹಸುಗಳು ಕಣ್ಮರೆಯಾಗುತ್ತಿದೆ. ವ್ಯಕ್ತಿಯೊಬ್ಬ ಆಗಮಿಸಿ ಗೋವುಗಳನ್ನು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಜನ ಹೇಳಿದರೂ ಪುರಾವೆ ಇರಲಿಲ್ಲ. ಆದರೆ, ಇದೀಗ ಆ ದೃಶ್ಯಾವಳಿಗಳು ಸೆರೆಯಾಗಿದೆ.
ನಾಲ್ಕು ಜನ ಆಗಮಿಸಿ ಆಕಳನ್ನು ಎಬ್ಬಿಸಿಕೊಂಡು ಒತ್ತಾಯಪೂರ್ವಕವಾಗಿ ಕಾರಿಗೆ ತುಂಬಿದ್ದಾರೆ. ಅದಕ್ಕೂ ಮೊದಲು ಆಕಳನ್ನು ಎಳೆದುಕೊಂಡು ಕಾರಿನ ಬಳಿ ಬಂದಿದ್ದಾರೆ. ಈ ವೇಳೆ ಇನ್ನೊಂದು ದನ ಕಳ್ಳತನಕ್ಕೆ ಯತ್ನಿಸಿದ್ದು, ಅದು ಸಾಧ್ಯವಾಗಿಲ್ಲ. ಈ ಎಲ್ಲಾ ಕಳ್ಳರನ್ನು ಪತ್ತೆ ಮಾಡಬೇಕು ಎಂದು ಜನ ಆಗ್ರಹಿಸಿದ್ದಾರೆ.