ಕುಮಟಾ ಪಟ್ಟಣದ ಎಲ್ಲಡೆ ಸಿಸಿ ಕ್ಯಾಮರಾ ಕಾಣಿಸುತ್ತಿದ್ದು, ಅವುಗಳ ಪೈಕಿ ಬಹುತೇಕ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಕ್ಯಾಮರಾ ಅಳವಡಿಸುವ ಹಾಗೂ ನಿರ್ವಹಣೆ ಮಾಡುವ ಟೆಂಡರ್ ಪಡೆದವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕ್ಯಾಮರಾ ಅಳವಡಿಸಿದ ಪುರಸಭೆ ಸಹ ಸಾರ್ವಜನಿಕರ ಹಿತವನ್ನು ಗಂಭೀರವಾಗಿ ಪರಿಗಣಿಸಿಲ್ಲ!
ಜನರ ಸುರಕ್ಷತೆಗಾಗಿ ಪುರಸಭೆ ಕುಮಟಾ ಪಟ್ಟಣದ ಹಲವು ಕಡೆ ಕ್ಯಾಮರಾ ಅಳವಡಿಸಿತ್ತು. ಆದರೆ, ಅದರ ನಿರ್ವಹಣೆಗೆ ಯಾರಿಗೂ ಪುರಸೋತಾಗಿಲ್ಲ. ಹೀಗಾಗಿ ಕ್ಯಾಮರಾಗಳು ಕೆಲಸ ಮಾಡುವುದನ್ನು ನಿಲ್ಲಿಸಿ ವರ್ಷ ಕಳೆದಿದೆ. ಇದರಿಂದ ಪ್ರಮುಖ ಘಟನಾವಳಿಗಳ ಬಗ್ಗೆ ಸಾಕ್ಷಿ ಸಿಗುತ್ತಿಲ್ಲ. ಪೊಲೀಸರಿಗೆ ಸಹ ಕ್ಯಾಮರಾದ ದೃಶ್ಯಾವಳಿಗಳು ಸಿಗುತ್ತಿಲ್ಲ. ಪಟ್ಟಣದ ಹೆಗಡೆ ಕ್ರಾಸ್, ಹೊಸ ಬಸ್ ನಿಲ್ದಾಣ, ಮೂರೂರು ಕ್ರಾಸ್, ಮಾಸ್ತಿಕಟ್ಟೆ ವೃತ್ತ, ಗಿಬ್ ಸರ್ಕಲ್ನಲ್ಲಿ ಅಳವಡಿಸಲಾದ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಇದರ ದುರಸ್ತಿಗಾಗಿ ಜನ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸಿಸಿ ಕ್ಯಾಮರಾ ಹಾಳಾಗಿರುವುದರಿಂದ ಪೊಲೀಸ್ ಕಾರ್ಯದೊತ್ತಡ ಹೆಚ್ಚಾಗಿದೆ. ಅಪರಾಧ ಪ್ರಕರಣ ಬೆನ್ನತ್ತಿದ ಪೊಲೀಸರು ಖಾಸಗಿ ಮಳಿಗೆಯವರು ಅಳವಡಿಸಿದ ಕ್ಯಾಮರಾದ ದೃಶ್ಯಾವಳಿಗಾಗಿ ಅಡ್ಡಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ `ಸಿಸಿ ಕ್ಯಾಮರಾ ದುರಸ್ತಿಗೆ ಕ್ರಮ ಜರುಗಿಸಲಾಗುತ್ತದೆ. ಟೆಂಡರ್ ಪಡೆದವರನ್ನು ಕರೆಯಿಸಿ ಎಲ್ಲಾ ಕ್ಯಾಮರಾ ಪರಿಶೀಲನೆಗೆ ಸೂಚಿಸುವೆ\’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ತಿಳಿಸಿದರು.