2023ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 18,649 ಜನ ಜನಿಸಿರುವುದು ಹಾಗೂ 11,182 ಜನ ಮರಣ ಹೊಂದಿರುವುದು ಮಾತ್ರ ಸರ್ಕಾರಿ ಕಡತದಲ್ಲಿ ದಾಖಲಾಗಿದ್ದು, ನೋಂದಣಿ ಆಗದ ಎಲ್ಲಾ ಪ್ರಕರಣಗಳನ್ನು ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ.
`ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಸಂಭವಿಸುವ ಜನನ ಮರಣಗಳನ್ನು ನಿಗಧಿತ ಸಮಯದಲ್ಲಿ ಮುಗಿಸಬೇಕು\’ ಎಂದವರು ಸೂಚಿಸಿದ್ದಾರೆ.
`ಗ್ರಾಮ ಪಂಚಾಯತ್ ಕಾರ್ಯದರ್ಶಿಗಳನ್ನು ಜನನ ಮರಣ ನೊಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಗ್ರಾಮ ಪಂಚಾಯತ್ನಲ್ಲಿ ಘಟಿಸುವ ಜನನ ಮರಣ ಘಟನೆಗಳನ್ನು 21 ದಿನಗಳ ಒಳಗಾಗಿ ನೋಂದಣಿ ಮಾಡಬೇಕು. ಜೊತೆಗೆ ಉಚಿತವಾಗಿ ಪ್ರಮಾಣಪತ್ರವನ್ನು ವಿತರಿಸಬೇಕು\’ ಎಂದವರು ಹೇಳಿದ್ದಾರೆ. ಈ ಕುರಿತಂತೆ ಗ್ರಾಮ ಪಂಚಾಯತ್ಗಳಲ್ಲಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ನಾಮಫಲಕ ಅಳವಡಿಸಬೇಕು ಎಂದು ಅವರು ತಾಕೀತು ಮಾಡಿದರು.
`ಅಪಘಾತ, ಆತ್ಮಹತ್ಯೆ, ಕೊಲೆ ಮುಂತಾದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ದಾಖಲಿಸುವ ಎಫ್ ಐ ಆರ್ ಪ್ರತಿ ಆಧರಿಸಿ ನೋಂದಣಿ ಮಾಡಬೇಕು. ಎಲ್ಲಾ ತಹಶೀಲ್ದಾರ್ ಹಾಗೂ ತಾ ಪಂ ಕಾರ್ಯನಿರ್ವಹಣಾಧಿಕಾರಿಗಳು ಆಗಾಗ ಇದರ ತಪಾಸಣೆ ನಡೆಸಬೇಕು. ಪ್ರತಿ ತಿಂಗಳು ಈ ಬಗ್ಗೆ ಪರಿಶೀಲನಾ ಸಭೆ ನಡೆಸಬೇಕು\’ ಎಂದು ಸೂಚಿಸಿದರು.
`ಇನ್ನೂ ಸೇವಾ ಸಿಂಧು ತಂತ್ರಾ0ಶದಲ್ಲಿ ಜನನ ಮರಣ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಸಲಾಗಿದ್ದು, ಡಿಜಿಟಲ್ ಸಿಗ್ನೇಚರ್ ಬಳಸಿ ಅನುಮೋದನೆ ನೀಡಿರುವ ಜನನ ಮರಣ ಪ್ರಮಾಣಪತ್ರಗಳನ್ನು ಸಾರ್ವಜನಿಕರು ಪಡೆಯಬಹುದು\’ ಎಂಬ ಮಾಹಿತಿ ಹಂಚಿಕೊoಡರು.