ಎಂಟು ಜನರ ಸಾವು ಹಾಗೂ ಮೂವರ ಕಣ್ಮರೆಗೆ ಕಾರಣವಾಗಿದ್ದ ಶಿರೂರು ಗುಡ್ಡ ಮತ್ತೆ ಕುಸಿಯುತ್ತಿದೆ.
ಗುರುವಾರ ರಾತ್ರಿಯಿಂದಲೇ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯಲು ಶುರುವಾಗಿದ್ದು, ಅಲ್ಲಿ ಅಳವಡಿಸಲಾದ ಬ್ಯಾರಿಕೆಡ್\’ವರೆಗೆ ಮಣ್ಣು ಬಂದಿದೆ. ಗುಡ್ಡ ಕುಸಿತವನ್ನು ನೋಡಿದ ಜನ ಈ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಆ ಭಾಗದಲ್ಲಿ ಹೆಚ್ಚಿನ ಅವಘಡ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ.
ಈ ಹಿಂದೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿ0ದ ಹೆದ್ದಾರಿ ಪ್ರಯಾಣ ಸ್ಥಗಿತಗೊಳಿಸಲಾಗಿತ್ತು. ಎರಡು ವಾರಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದ ನಂತರ ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮತ್ತೆ ಕುಸಿತ ಆದರೂ ಸಂಚಾರಕ್ಕೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಮೆಂಟಿನ ಬ್ಯಾರಿಕೆಡ್ ಅಳವಡಿಸಿದ್ದು, ಅಲ್ಲಿಯವರೆಗೆ ಇದೀಗ ಗುಡ್ಡದ ಮಣ್ಣು ಆವರಿಸಿದೆ.
ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಜಿಲ್ಲೆಯ ಹಲವು ಕಡೆ ಭೂ ಕುಸಿತ ಸಾಧ್ಯತೆಯ ವರದಿ ನೀಡಿದ್ದು, ಎಲ್ಲೆಲ್ಲವೂ ಕಟ್ಟೆಚ್ಚರವಹಿಸಲಾಗಿದೆ. ಕಾರವಾರದ ಬಿಣಗಾ, ಅಂಕೋಲಾದ ಶಿರೂರು, ಹೊನ್ನಾವರದ ಗುಣವಂತೆ, ಭಟ್ಕಳದ ಹೆದ್ದಾರಿ ಭಾಗದಲ್ಲಿ ಮತ್ತೆ ಭೂ ಕುಸಿತದ ಬಗ್ಗೆ ವರದಿಯಲ್ಲಿದ್ದು ಅಲ್ಲೆಲ್ಲವೂ ಜಿಲ್ಲಾಡಳಿತ ನಿಗಾ ಇರಿಸಿದೆ.