ಕಾರವಾರ ಕಾರಾಗೃಹದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡಿರುವ ಕೈದಿಗಳ ಆರೋಗ್ಯ ವಿಚಾರಿಸಲು ಪೊಲೀಸ್ ಅಧಿಕ್ಷಕ ಎಂ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದ್ದು, ಪೊಲೀಸ್ ಅಧಿಕ್ಷಕರು ಬಂದರೂ ಆರೋಪಿತರು ಹಾಸಿಗೆ ಬಿಟ್ಟು ಕದಲಲಿಲ್ಲ.
ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದ ಮದಮದ್ ಮುಜಾಮಿಲ್ ಹಾಗೂ ಮೊಹಮದ್ ಫರಾನ್ ಚಬ್ಬಿ ಎಂಬಾತರಿಗೆ ಜೈಲಿನ ಒಳಗೆ ಮಾದಕ ವ್ಯಸನ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡು ಅವರು ಪ್ರತಿಭಟಿಸಿದ್ದರು. ಈ ಇಬ್ಬರು ಗಾಂಜಾ ವ್ಯಾಪಾರದ ಜೊತೆ ಸೇವನೆಯನ್ನು ರೂಢಿಸಿಕೊಂಡಿದ್ದು, ಕೊನೆಗೆ `ತಂಬಾಕನ್ನಾದರೂ ನೀಡಿ\’ ಎಂದು ಅಂಗಲಾಚಿದ್ದರು. ಆದರೆ, ಜೈಲು ಸಿಬ್ಬಂದಿ ಇದಕ್ಕೆ ಒಪ್ಪಿರಲಿಲ್ಲ. ಇತರೆ ಕೈದಿಗಳು ಸಹ `ತಂಬಾಕು ಬೇಕು\’ ಎಂದು ಘೋಷಣೆ ಕೂಗಿದ್ದರು. ಇದೇ ವಿಷಯವಾಗಿ ಜೈಲಿನಲ್ಲಿ ಜಗಳ ನಡೆದಿದ್ದು, ಆರೋಪಿಯೊಬ್ಬ ಕಲ್ಲಿನಿಂದ ತಲೆ ಜಜ್ಜಿಕೊಂಡಿದ್ದ. ನಂತರ ಆತ ಎಸೆದ ಕಲ್ಲು ಇನ್ನೊಬ್ಬನಿಗೆ ತಗುಲಿ ಆತನೂ ಗಾಯಗೊಂಡಿದ್ದ.
ಗಾಯಗೊ0ಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾಧ್ಯಮದ ಎದುರು ಈ ಇಬ್ಬರು ವಾರ್ಡನ್ ವಿರುದ್ಧ ಕಿಡಿಕಾರಿದ್ದರು. ನ್ಯಾಯಾಧೀಶರ ಬಳಿಯೂ ವಾರ್ಡನ್ ವಿರುದ್ಧ ದೂರು ನೀಡುವುದಾಗಿ ಬೆದರಿಸಿದ್ದರು. ಪ್ರಸ್ತುತ ಈ ಇಬ್ಬರೂ ಆರೋಪಿತರಿಗೆ ಕೈದಿಗಳ ಕೋಣೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯ ವಿಚಾರಿಸಲು ಎಸ್ಪಿ ಎಂ ನಾರಾಯಣ ಆಸ್ಪತ್ರೆಗೆ ತೆರಳಿದ್ದು, ಕನಿಷ್ಟ ಸೌಜನ್ಯಕ್ಕೂ ಅವರು ಹಾಸಿಗೆಯಿಂದ ಮೇಲೆ ಏಳಲಿಲ್ಲ.
`ಆಸ್ಪತ್ರೆಯಲ್ಲಿರುವ ಸರ್ಕಾರಿ ಚಾನಲ್ ಬರುವ ಟಿವಿ ನಮಗೆ ಬೇಡ. ಖಾಸಗಿ ವಾಹಿನಿಗಳು ಬೇಕು ಎಂದು ಆರೋಪಿತರು ಪಟ್ಟು ಹಿಡಿದಿದ್ದು, ಇದಾದ ನಂತರ ತಂಬಾಕಿಗೆ ಬೇಡಿಕೆ ಇಟ್ಟಿದ್ದರು. ತಂಬಾಕು ನೀಡದೇ ಇದ್ದಲ್ಲಿ ನ್ಯಾಯಾಧೀಶರ ಮುಂದೆ ವಾರ್ಡನ್ ವಿರುದ್ಧ ದೂರು ನೀಡುವುದಾಗಿ ಬೆದರಿಸಿದ್ದರು. ಕಲ್ಲು ತೂರಿದ್ದು ಸಹ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ ಆಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಆರೋಪಿತರ ವಿರುದ್ಧ ದೂರು ದಾಖಲಾಗಿದೆ\’ ಎಂದು ಎಸ್ಪಿ ಎಂ ನಾರಾಯಣ ಹೇಳಿದ್ದಾರೆ.