ಯಲ್ಲಾಪುರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರೂ ಆಗಿರುವ ಪತ್ರಕರ್ತ ಬಿ ಎನ್ ವಾಸರೆ ಮೇಲೆ ಸಿಪಿಐ ಭೀಮಣ್ಣ ಸೂರಿ ನಡೆಸಿದ ದೌರ್ಜನ್ಯದ ವಿರುದ್ಧ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಯಲ್ಲಾಪುರ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಸಹ ಈ ಘಟನೆಯನ್ನು ತೀವೃವಾಗಿ ಖಂಡಿಸಿ ಅಮಾನುಷವಾಗಿ ವರ್ತಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ ಹುಲಸದಾರ್ ಎಂಬಾತರ ಅನುಚಿತ ವರ್ತನೆ ಬಗ್ಗೆ ಅಲ್ಲಿನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬಿ ಎನ್ ವಾಸರೆ ವಿದ್ಯಾರ್ಥಿಗಳ ಪರ ಹೋರಾಟಕ್ಕೆ ನಿಂತಿದ್ದರು. ವರ್ಗಾವಣೆಗೊಂಡ ಪ್ರಾಚಾರ್ಯ ಮತ್ತೆ ಅದೇ ವಸತಿ ಶಾಲೆಗೆ ಆಗಮಿಸಿದ ಹಿನ್ನಲೆ ವಿದ್ಯಾರ್ಥಿಗಳ ಜೊತೆ ಪಾಲಕರು ಪ್ರತಿಭಟಿಸಿದ್ದರು. ಈ ವೇಳೆ ಅಲ್ಲಿ ತೆರಳಿದ್ದ ಬಿ ಎನ್ ವಾಸರೆ ಹಾಗೂ ಇನ್ನಿತರ ವರದಿಗಾರರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದರು. ಅದರಲ್ಲಿಯೂ ಮುಖ್ಯವಾಗಿ ಸಿಪಿಐ ಭೀಮಣ್ಣ ಸೂರಿ ಬಿ ಎನ್ ವಾಸರೆ ಅವರನ್ನು ಹಿಡಿದು ಎಳೆದಾಡಿದ್ದರು.
ಈ ವಿದ್ಯಮಾನ ಖಂಡಿಸಿ ವಿವಿಧ ತಾಲೂಕಿನ ಪತ್ರಕರ್ತರು ಹಾಗೂ ಸಾಹಿತಿಗಳು ತಪ್ಪಿರತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಈ ಹೋರಾಟಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಸಹ ಬೆಂಬಲ ವ್ಯಕ್ತಪಡಿಸಿದ್ದು, `ಅಲ್ಲಿನ ಶಾಸಕ ಆರ್ ವಿ ದೇಶಪಾಂಡೆ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಬೇಕು\’ ಎಂದು ಆಗ್ರಹಿಸಿದ್ದಾರೆ. `ಮಾಧ್ಯಮದವರು, ಪತ್ರಕರ್ತರು ಹಾಗೂ ಜನಪ್ರತಿನಿಧಿಗಳ ಮೇಲೆ ಏರಿ ಹೋದ ದಾಂಡೇಲಿಯ ಆರಕ್ಷಕರ ನಡೆ ಖಂಡನೀಯ. ಪರಿಸ್ಥಿತಿ ಶಾಂತಗೊಳಿಸಬೇಕಿದ್ದ ಪೊಲೀಸರೇ ಈ ರೀತಿ ವರ್ತಿಸುವುದು ಸರಿಯಲ್ಲ\’ ಎಂದವರು ಹೇಳಿದ್ದಾರೆ.