ಕುಮಟಾ: ಕೋಳಿಗೂಡಿಗೆ ಬಂದ ಹಾವು ಹೊಡೆಯಲು ಬಂದೂಕು ಬಳಸಿದ ಪ್ರಥಮ ಸುಬ್ಬು ನಾಯ್ಕ (32) ಎಂಬಾತ ಅದೇ ಬಂದೂಕಿನ ಗುಂಡಿಗೆ ಬಲಿಯಾಗಿದ್ದು, ಸಾವನಪ್ಪಿದ ಪ್ರಥಮ ನಾಯ್ಕ ಸೇರಿ ಸಾಕ್ಷಿನಾಶ ಮಾಡಿದ ಆರೋಪದ ಅಡಿ ಇನ್ನಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಮಟಾ ಕತಗಾಲಿನ ಮಡಗೊಳ್ಳಿಯಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದ ಪ್ರಥಮ ಸುಬ್ಬು ನಾಯ್ಕ ಒಂದಷ್ಟು ಕೋಳಿಗಳನ್ನು ಸಾಕಿಕೊಂಡಿದ್ದ. ಕೋಳಿ ಗೂಡಿಗೆ ಪದೇ ಪದೇ ಹೆಬ್ಬಾವು ಬರುತ್ತಿದ್ದ ಕಾರಣ ಅಕ್ರಮವಾಗಿ ನಾಡ ಬಂದೂಕು ತಯಾರಿಸಿಕೊಂಡಿದ್ದ. ಅದನ್ನು ಆತ ಮನೆಯಲ್ಲಿರಿಸಿಕೊಂಡಿದ್ದು, ಅಗಸ್ಟ 31ರ ಶನಿವಾರ ನಸುಕಿನಲ್ಲಿ ಬಂದೂಕು ಹಿಡಿದು ಹೋದವ ಮನೆಗೆ ಮರಳಿಲ್ಲ.
ಬೆಳಗ್ಗೆ ಶವ ನೋಡಿದ ಆತನ ಅಕ್ಕ ರಂಜನಾ ಆನಂದ ಗೋಕಲೆ ಬಂದೂಕನ್ನು ತೋಟದಲ್ಲಿ ಎಸೆದಿದ್ದಾರೆ. ನಂತರ ತಮ್ಮ ಪರಿಚಯಸ್ಥರಾದ ರಾಮ ಮಾಸ್ತ ದೇಶಭಂಡಾರಿ, ಉಲ್ಲಾಸ ದೇಶಭಂಡಾರಿ ಹಾಗೂ ಅರುಣ ದೇಶಭಂಡಾರಿ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಘಟನೆ ಬಗ್ಗೆ ವಿವರಿಸಿದ್ದಾರೆ. ಸ್ಪೋಟಕ್ಕೆ ಬಳಸುವ ಕೇಪನ್ನು ನದಿಗೆ ಎಸೆಯುವಂತೆ ಸೂಚಿಸಿದ್ದು, ರಾಮ ದೇಶಬಂಡಾರಿ ಕೇಪನ್ನು ನದಿಗೆ ಎಸೆದು ಸಾಕ್ಷಿನಾಶ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಈ ಎಲ್ಲಾ ಘಟನಾವಳಿಗಳ ಬಗ್ಗೆ ಪ್ರಥಮ ನಾಯ್ಕರ ಪತ್ನಿ ರೇಷ್ಮಾ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಅನ್ವಯ ಪಿಎಸ್ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.
ಸಾವಿನ ಬಗ್ಗೆ ಹಲವು ಅನುಮಾನ
ಎಂಥ ನಾಡ ಬಂದೂಕು ಆಗಿದ್ದರೂ ಬಂದೂಕಿನಿAದ ಒಮ್ಮೆ ಹೊರ ಹೋದ ಗುಂಡು ಬಂದೂಕು ಹಿಡಿದವನಿಗೆ ಬಡಿಯುವ ಸಾಧ್ಯತೆಗಳಿಲ್ಲ. ಹೆಬ್ಬಾವಿಗೆ ತಾಗಿದ ಗುಂಡು ಪುಟಿದು ಪ್ರಥಮ ನಾಯ್ಕ ಹಣೆಗೆ ಬಡಿದಿದೆ ಎನ್ನುವ ಹಾಗಿಲ್ಲ. ಹೆಬ್ಬಾವಿನ ಶವ ಸಹ ಅಲ್ಲಿ ಸಿಕ್ಕಿಲ್ಲ. ರಾತ್ರಿ ಮಳೆ ಸಹ ಜೋರಾಗಿದ್ದರಿಂದ ಅಲ್ಲಿ ಏನಾಯಿತು? ಎಂದು ಗೊತ್ತಾಗಿಲ್ಲ. ಗುಂಡಿನ ಸದ್ದು ಸಹ ಕೇಳಿಸಿಲ್ಲ.
ದೂರುದಾರರು ಆಕಸ್ಮಿಕ ಗುಂಡು ತಗುಲಿ ಪ್ರಥಮ ನಾಯ್ಕ ಸಾವನಪ್ಪಿದ ಬಗ್ಗೆ ತಿಳಿಸಿದ್ದು, ಪೊಲೀಸರು ಪ್ರಾಥಮಿಕ ವರದಿಯಲ್ಲಿ ಅದನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಈ ಸಾವಿನ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗುತ್ತಿದೆ.