ಹಳಿಯಾಳ: ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗರಲ್ಲಿ ಉಂಟಾಗಿದ್ದ ಬಿನ್ನಾಭಿಪ್ರಾಯ ಮುಂದುವರೆದಿದ್ದು, ಜಿಲ್ಲಾ ಮಟ್ಟದ ನಾಯಕರ ಮುಂದೆ ಬಿರುಕು ಪ್ರದರ್ಶನವಾಗಿದೆ. ಸದಸ್ಯತ್ವ ಅಭಿಯಾನದ ಮೂಲಕ ಪಕ್ಷ ಸಂಘಟನೆಗೆ ತೆರಳಿದ್ದ ಬಿಜೆಪಿ ನಾಯಕರು ಅದು ಸಾಧ್ಯವಾಗದೇ ಅಲ್ಲಿಂದ ಮರಳಿದ್ದಾರೆ.
ಗಣೇಶ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಸಭೆ ಆಯೋಜಿಸಿತ್ತು. ಈ ಸಭೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಶಿವಾನಿ ನರಸಾನಿ ಸಹ ಭಾಗವಹಿಸಿದ್ದರು. ಆದರೆ, ಶಿವಾನಿ ನರಸಾನಿ ಭಾಗವಹಿಸಿದ್ದನ್ನು ಕೆಲವರು ಆಕ್ಷೇಪಿಸಿದ್ದು, ವೇದಿಕೆ ಏರಿದ ಅವರನ್ನು ಎಳೆದಾಡಿದರು. ಶಿವಾನಿ ನರಸಾನಿ ಆಗಮನ ವಿರೋಧಿಸಿ ಒಂದು ಬಣದವರು ಜಿಲ್ಲಾ ಮಟ್ಟದ ನಾಯಕರೊಂದಿಗೆ ವಾಗ್ವಾದ ನಡೆಸಿದರು. ಸಭೆ ಶುರುವಾಗುವ ಮುನ್ನವೇ ಗಲಾಟೆ ನಡೆದಿದ್ದರಿಂದ ನಾಯಕರು ಅಲ್ಲಿಂದ ಮರಳಿದರು. ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.