ಕುಮಟಾ: ಕಾರು ಹಾಗೂ ಬೈಕು ಸೇರಿ ವಿವಿಧ ಸರಕು ಸಾಗಾಣಿಕೆ ಮಾಡುವ ಕಂಟೇನರ್ ವಾಹನದಲ್ಲಿ ಕದ್ದುಮುಚ್ಚಿ ಜಾನುವಾರು ಸಾಗಿಸುತ್ತಿದ್ದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮಹಾರಾಷ್ಟ್ರ ಕೊಲ್ಲಾಪುರದಿಂದ ಕೇರಳದ ಪಲಕ್ಕಾಡ್\’ಗೆ ಕಂಟೇನರ್ ವಾಹನ ತೆರಳುತ್ತಿದ್ದು, ಶನಿವಾರ ಬೆಳಗ್ಗೆ ಕುಮಟಾ ಪೊಲೀಸರು ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದ್ದರು. ಆಗ ಕಂಟೇನರ್ ಚಾಲಕ ಎಲ್ಲಾ ಕಾಗದ ಪತ್ರಗಳೊಂದಿಗೆ ಪೊಲೀಸರ ಎದುರು ಬಂದಿದ್ದು, ಕಂಟೇನರ್ ಒಳಗೆ ಸರಕು ಸಾಮಗ್ರಿ ಕೊಂಡೊಯ್ಯುತ್ತಿರುವುದಾಗಿ ಹೇಳಿಕೊಂಡಿದ್ದ. ಇದನ್ನು ನಂಬಿದ ಪೊಲೀಸ್ ಸಿಬ್ಬಂದಿ ಆ ವಾಹನವನ್ನು ಬಿಟ್ಟು ಕಳುಹಿಸುವ ತಯಾರಿಯಲ್ಲಿದ್ದರು. ಅದಾಗಿಯೂ ಸಣ್ಣ ಅನುಮಾನದ ಹಿನ್ನಲೆ ಪಿಎಸ್ಐ ರವಿ ಗುಡ್ಡಿ ಕಂಟೇನರ್ ಒಳಗೆ ತಪಾಸಣೆ ನಡೆಸಿದರು.
ಅಕ್ರಮದ ಸುಳಿವು ನೀಡಿದ ಸಗಣಿ ವಾಸನೆ!
ಕಂಟೇನರ್ ಒಳಭಾಗದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಜಾನುವಾರುಗಳನ್ನು ಬಂಧಿಸಲಾಗಿತ್ತು. ಜಾನುವಾರುಗಳ ಅರೆಚಾಟ ಸಹ ಹೊರಕೇಳದ ರೀತಿಯಲ್ಲಿತ್ತು. ಹೀಗಾಗಿ 26 ದಷ್ಟಪುಷ್ಟವಾದ ಎಮ್ಮೆ ಹಾಗೂ 1 ಕೋಣವನ್ನು ಕೊಲ್ಲಾಪುರದಿಂದ ಕುಮಟಾವರೆಗೆ ಸಾಗಿಸಿದರೂ ಯಾವ ಪೊಲೀಸರಿಗೂ ಗೊತ್ತಾಗಿರಲಿಲ್ಲ. ಆದರೆ, ತಪಾಸಣೆ ವೇಳೆ ಸಣ್ಣದಾಗಿ ಸಗಣಿ ವಾಸನೆ ಬಂದಿದ್ದು ಕಂಟೇನರ್ ಬಾಗಿಲು ತೆರೆದಾಗ ಎಮ್ಮೆಗಳ ಕೂಗಾಟ ಕೇಳಿಸಿತು. ಪೊಲೀಸರ ಸೂಕ್ಷ್ಮತೆಯಿಂದ ಬಹುದೊಡ್ಡ ಅಕ್ರಮ ಜಾನುವಾರು ಸಾಗಾಟ ಜಾಲ ಪತ್ತೆಯಾಯಿತು.
ಈ ಎಲ್ಲಾ ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು. ಸಾಗಾಟಕ್ಕೆ ಬಳಸಿದ 8 ಲಕ್ಷ ರೂ ಮೌಲ್ಯದ ಕಂಟೇನರ್ ಜೊತೆ 8.8 ಲಕ್ಷ ರೂ ಮೌಲ್ಯದ 26 ಎಮ್ಮೆ ಹಾಗೂ ಒಂದು ಕೋಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಜಾನುವಾರು ಸಾಗಾಟದಲ್ಲಿ ಭಾಗಿಯಾಗಿದ್ದ ಮೈಸೂರಿನ ಅಯಲ್ ಅಹ್ಮದ್, ಕೇರಳ ಕಾಸರಗೋಡಿನ ಅಬುಬಕರ್ ಚರಕಾಳ, ಅಬ್ದುಲ್ ರೆಹಮಾನ್, ಹೊಳೆ ನರಸಿಂಹಪುರದ ಅಸ್ಗರ ಹುಸೇನ್ ಎಂಬಾತರನ್ನು ಬಂಧಿಸಿದ್ದಾರೆ. ಲಾರಿಯ ಮಾಲಕ ದಾವಣಗೆರೆಯ ಚಮನ್ ಮಹಮದ್ ಪರಾರಿಯಾಗಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ. ಪಿಎಸ್ಐ ಮಂಜುನಾಥ ಗೌಡರ್ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.
ಕಂಟೇನರ್ ಒಳಗೆ ಎಮ್ಮೆಗಳ ಸಾಗಾಟ ಹೇಗಿತ್ತು? ಪೊಲೀಸರು ವಶಕ್ಕೆ ಪಡೆದ ಜಾನುವಾರುಗಳು ಹೇಗಿವೆ? ವಿಡಿಯೋ ಇಲ್ಲಿ ನೋಡಿ..