ಯಲ್ಲಾಪುರ: ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ವಿವಿಧ ರೀತಿ ಸಾಧನೆ ಮಾಡಿದವರನ್ನು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯವರು ಗುರುತಿಸಿ ಅಡಿಕೆ ಭವನದಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿದ್ದಾರೆ.
ನಂತರ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ `ರೈತರ ಹಿತಕ್ಕಾಗಿ ಸಂಘ ಸ್ಥಾಪನೆಯಾಗಿದ್ದು, ರೈತರ ಸಹಕಾರದಿಂದಲೇ ಸಂಘ ಸಾಧನೆ ಮಾಡಿದೆ\’ ಎಂದು ಹೇಳಿದರು. `ನಮ್ಮ ಸೇವೆ ಮೆಚ್ಚಿ ಅಂಕೋಲಾ, ಜೊಯಿಡಾ, ಮುಂಡಗೋಡಿನ ಕೃಷಿಕರು ಹಾಗೂ ಅಲ್ಲಿನ ಸಹಕಾರಿ ಸಂಘದವರು ಸಂಪೂರ್ಣ ಬೆಂಬಲ ನೀಡಿದ್ದಾರೆ\’ ಎಂದರು.
`ಆಧುನಿಕ ಕಾಲಘಟ್ಟದಲ್ಲಿದ್ದ ಕೃಷಿಗೆ ಹಲವು ಸವಾಲು ಎದುರಾಗುತ್ತದೆ. ಹೊಸ ಹೊಸ ಆವಿಷ್ಕಾರದೊಂದಿಗೆ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಅದನ್ನು ಹಿಮ್ಮೆಟ್ಟಲು ಸಾಧ್ಯ\’ ಎಂದರು. `ಅಡಿಕೆಯ ಜೊತೆಯಲ್ಲಿ ಬಾಳೆ, ತೆಂಗು, ಕಾಳುಮೆಣಸು ಸೇರಿದಂತೆ ಬದಲಿ ಬೆಳೆಗಳನ್ನು ಅಳವಡಿಸಿಕೊಂಡಾಗ ಕೃಷಿಯಲ್ಲಿ ಯಶಸ್ಸು ಸಿಗುತ್ತದೆ\’ ಎಂದು ತಮ್ಮ ಅನುಭವ ಹಂಚಿಕೊ0ಡರು. ಸನ್ಮಾನ ಸ್ವೀಕರಿಸಿದ ವಿ.ಎನ್.ಭಟ್ಟ ಏಕಾನ ಮಾತನಾಡಿ `ಪ್ರತಿಯೊಬ್ಬ ರೈತರು ತಮ್ಮ ಮಕ್ಕಳಿಗೂ ಕೃಷಿ ಕಾಯಕದ ಬಗ್ಗೆ ತಿಳಿಸಬೇಕು. ಸಾವಯವ ಕೃಷಿಗೆ ಒತ್ತು ನೀಡಬೇಕು\’ ಎಂದರು. ಸನ್ಮಾನ ಸ್ವೀಕರಿಸಿದ ಸದಾಶಿವ ಕಮಲಾಕರ ದೇಸಾಯಿ ಮಾತನಾಡಿದರು. ವೆಂಕಟರಮಣ ಭಟ್ಟ ಕಾಶಿಮನೆ, ಶಾಂತಾರಾಮ ಹೆಗಡೆ ಬಾಳೆಹಳ್ಳಿ, ರವೀಂದ್ರ ಭಟ್ಟಕಾನಗೋಡು, ಅಕ್ಷಯ ಗಾಂವ್ಕರ ನೆಲೆಪಾಲ, ಮಹೇಶ ಹೆಗಡೆ ಹೆಮ್ಮಾಡಿ, ಸದಾಶಿವ ದೇಸಾಯಿ ಗುಂದ, ಗಂಗಾ ಭಟ್ಟ ತಟಗಾರ, ರಾಮಚಂದ್ರ ಹೆಗಡೆ ಕಂಚನಳ್ಳಿ, ಛಾಯಪ್ಪ ಎಂ ಕೆಂಚನ್ನವರ ಇಂದೂರು, ವೆಂಕಟರಮಣ ಎಸ್.ಮರಾಠಿ, ಗಜಾನನ ವಿ ಭಟ್ಟ ಕುಟ್ರೇಬೈಲ್ ಸನ್ಮಾನ ಸ್ವೀಕರಿಸಿದರು.
ಸಂಘದ ಉಪಾಧ್ಯಕ್ಷ ಎಂ.ಜಿ.ಭಟ್ಟ ಶೀಗೇಪಾಲ, ಲೆಕ್ಕ ಪರಿಶೋಧಕ ಎಸ್.ಜಿ.ಹೆಗಡೆ ಬೆದೆಹಕ್ಕಲು, ಪ್ರಧಾನ ವ್ಯವಸ್ಥಾಪಕ ವಿನಾಯಕ ಹೆಗಡೆ ಇತರರು ಇದ್ದರು. ನಿರ್ದೇಶಕ ದತ್ತಾತ್ರೇಯ ಬೋಳಗುಡ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.