ಹೊನ್ನಾವರ: `ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಬಗ್ಗೆ ಸರ್ಕಾರಕ್ಕೆ ಅರವಿದಿದ್ದು, ಸರ್ಕಾರದ ನಿಲುವು ಸದಾ ಜನಪರ\’ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಅರಣ್ಯವಾಸಿಗಳ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯವಾಸಿಗಳು ಸಚಿವರನ್ನು ಭೇಟಿ ಮಾಡಿ ಬೆಂಗಳೂರಿನ ಜನಪ್ರತಿನಿಧಿ ಸಭೆ ಹಾಗೂ ಸೆ.25 ರಂದು ರಾಜ್ಯ ಸರಕಾರ ವರದಿಯ ಕುರಿತು ನಿಲುವು ಪ್ರಕಟಿಸುವ ಬಗ್ಗೆ ಚರ್ಚಿಸಿದರು.
ಈ ವೇಳೆ ರಂಗನ್ ವರದಿ ಸಚಿವ ಸಂಪುಟ ಉಪಸಮಿತಿ ಸದ್ಯಸರು ಆಗಿರುವ ಸಚಿವರು `ವರದಿ ತಿರಸ್ಕರಿಸಲು ತೀವ್ರ ಒತ್ತಡ ರಾಜ್ಯಾದಂತ ಇದ್ದು ಅದನ್ನು ತಿರಸ್ಕರಿಸುವ ಪ್ರಯತ್ನ ನಡೆದಿದೆ\’ ಎಂದರು. `ಉತ್ತರ ಕನ್ನಡದಲ್ಲಿ ವರದಿಯಿಂದ ಜನರ ಮೂಲಭೂತ ಸೌಕರ್ಯ ಮತ್ತು ಅರಣ್ಯವಾಸಿಗಳ ಹಕ್ಕಿಗೆ ಆತಂಕ ಉಂಟಾಗಲಿದೆ\’ ಎಂದು ಅವರು ತಿಳಿಸಿದರು.
ಪ್ರಮುಖರಾದ ಜೆ.ಎಮ್.ಶೆಟ್ಟಿ, ದೇವರಾಜ್ ಗೊಂಡ, ಬಾಲಚಂದ್ರ ಶೆಟ್ಟಿ ಅಚವೆ, ಮಹಾಬಲೇಶ್ವರ್ ನಾಯ್ಕ ಬೇಡ್ಕಣಿ, ಸಂಕೇತ ಹೊನ್ನಾವರ, ದಿನೇಶ ನಾಯ್ಕ ಸಿದ್ದಾಪುರ, ವಿನೋದ ನಾಯ್ಕ ಎಲ್ಕೋಟಗಿ, ಚಂದು ಬೆಳಕೆ, ಸುರೇಶ ಕರ್ನಾಕೊಲ್, ಆಯೂಬ್ ಉಮ್ಮರ್ ಬೆಟ್ಕುಳಿ, ಜಿ.ಕೆ.ಗೌಡ ಇದ್ದರು.
ಜಿಲ್ಲೆಯ ಅಭಿವೃದ್ಧಿಗೆ ದಿನಕರ ದೇಸಾಯಿ ಅವರ ಕೊಡುಗೆ ಅನನ್ಯ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ದಿನಕರ ದೇಸಾಯಿ ಅವರ ಕೊಡುಗೆ ಅನನ್ಯವಾದದ್ದು. ಹಳ್ಳಿಗಳಲ್ಲಿ ಶಾಲೆಗಳು ಇಲ್ಲದ ಸಮಯದಲ್ಲಿ ಶಾಲೆಗಳನ್ನು ನಿರ್ಮಿಸಿ, ಜನರು ಮುಖ್ಯ ವಾಹಿನಿಗೆ ಬರಲು ಅವರ ಕೊಡುಗೆ ಅಪಾರವಾಗಿ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್ ನಾಯ್ಕ ಬೇಡ್ಕಣಿ ಹೇಳಿದರು.
ತಾಲ್ಲೂಕಿನ ಬೇಡ್ಕಣಿ ಜನತಾ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಸಾಮಾಜಿಕ ಸಾಹಿತ್ಯಿಕ ಕೊಡುಗೆ ಕುರಿತು ಉಪನ್ಯಾಸ ಮತ್ತು ಚುಟುಕು ವಾಚನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಮತ್ತು ಸರ್ಕಾರ ದಾರಿ ತಪ್ಪಿದಾಗ ತಮ್ಮ ಚುಟುಕುಗಳ ಮೂಲಕ ಎಚ್ಚರಿಸುವ ಕೆಲಸವನ್ನು ದೇಸಾಯಿಯವರು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಉಪನ್ಯಾಸಕ ರತ್ನಾಕರ ನಾಯ್ಕ ದಿನಕರ ದೇಸಾಯಿ ಅವರ ಸಾಮಾಜಿಕ ಸಾಹಿತ್ಯಿಕ ಕೊಡುಗೆಗಳಿಗೆ ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳು ದಿನಕರ ದೇಸಾಯಿ ಅವರ ಸಾಹಿತ್ಯಗಳನ್ನು ಓದುವುದು ಮಾತ್ರವಲ್ಲದೆ ಅದರ ಆಶಯವನ್ನು ಅರಿಯಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಗೋಪಾಲ್ ನಾಯ್ಕ ಭಾಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಭಾಗಿಯಾದ ರಂಗ ಕಲಾವಿದ ಗಣಪತಿ ಹೆಗಡೆ ಗುಂಜಗೋಡು, ಪತ್ರಕರ್ತ ಸುಜಯ್ ಭಟ್ ಮುತ್ತಿಗೆ ಮಾತನಾಡಿದರು. ಶಾಲೆಯ ಮುಖ್ಯ ಅಧ್ಯಾಪಕಿ ಪ್ರತಿಮಾ ಪಾಲೇಕರ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ವೇದಿಕೆಯಲ್ಲಿದ್ದರು. ಶಿಕ್ಷಕ ಜಿ.ಟಿ ಭಟ್ ಸ್ವಾಗತಿಸಿದರು. ಕಸಾಪ ಕೋಶಾಧ್ಯಕ್ಷ ಪಿ.ಬಿ ಹೊಸೂರು ವಂದಿಸಿದರು. ಶಿಕ್ಷಕ ವಿ.ಟಿ ಗೌಡ ನಿರೂಪಿಸಿದರು.
ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದ ಮಾಜಿ ಶಾಸಕ
ಮುಂಡಗೋಡ: `ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದರೆ ಸಾಲದು. ಕ್ರೀಡೆಯಲ್ಲಿಯು ಭಾಗವಹಿಸಿ ಸಾಧನೆ ಮಾಡಿದರೆ ವಿದ್ಯಾರ್ಥಿಗಳ ಜೀವನ ಸಾರ್ಥಕ\’ ಎಂದು ಮಾಜಿ ಶಾಸಕ ವಿ.ಎಸ್ ಪಾಟೀಲ್ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
`ಸಾಮಾನ್ಯವಾಗಿ ಜನರಿಗೆ 40 ವರ್ಷದ ನಂತರ ಬಿಪಿ ಶುಗರ್ ಈ ರೀತಿ ನಾನಾ ಕಾರಣಗಳಿಂದ ರೋಗಕ್ಕೆ ತುತ್ತಾಗುತ್ತಾರೆ. ಯೋಧರಿಗೆ ಹಾಗೂ ಕ್ರೀಡಾಪಟುಗಳಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು\’ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ ಪಾಟೀಲ್ ಮಾತನಾಡಿದರು. ಪ.ಪಂ ಉಪಾಧ್ಯಕ್ಷೆ ರಹಿಮಾ ಬಾನು ಕುಂಕೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಶಿಕ್ಷಣಾಧಿಕಾರಿ ಜಕಣಾಚಾರಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ ವಿನಯಕುಮಾರ್ ಶೆಟ್ಟಿ, ಜಿಲ್ಲಾ ಪ್ರೌ.ಮು ಸಂಘದ ಅಧ್ಯಕ್ಷ ಎಸ್.ಡಿ ಮುಡೆಣ್ಣವರ, ಡಾ.ರಮೇಶ ಅಂಬಿಗೇರ ಇತರರು ಇದ್ದರು.
ಶಿರಸಿಗೆ ಬಂದಿದ್ದ ಅಪ್ಪ ಮಗನಿಗೆ ಅಪಘಾತ
ಶಿರಸಿ: ಹುಬ್ಬಳ್ಳಿಯ ವಿನಾಯಕ ಕಲ್ಯಾಣಿ ಹಾಗೂ ಅವರ ತಂದೆ ಗಂಗಾಧರ ಕಲ್ಯಾಣಿ ಎಂಬಾತರಿಗೆ ಶಿರಸಿಯ ಕೆಎಸ್ಆರ್ಟಿಸಿ ಡಿಪೋ ಬಳಿ ಸ್ಕೂಟಿ ಡಿಕ್ಕಿಯಾಗಿದೆ. ಪರಿಣಾಮ ಗಂಗಾಧರ ಕಲ್ಯಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಬ್ಬಳ್ಳಿ ನೇಕಾರನಗರದಲ್ಲಿ ಗಂಗಾಧರ ಕಲ್ಯಾಣಿ ಟೇಲರಿಂಗ್ ಮಾಡಿಕೊಂಡಿದ್ದರು. ಶಿರಸಿಗೆ ಬಂದಿದ್ದ ಅವರು ಕೆಎಸ್ಆರ್ಟಿಸಿ ಡಿಪೋ ಚಹಾ ಕುಡಿದು ಹೊರಗೆ ನಿಂತಿದ್ದ ಅವರಿಗೆ ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆ ಸ್ಕೂಟಿ ಓಡಿಸಿಕೊಂಡು ಬಂದ ಎಸಳೆಯ ಅಣ್ಣಪ್ಪ ಆನಂದ ಚಲವಾದಿ ಡಿಕ್ಕಿ ಹೊಡೆದಿದ್ದಾರೆ. ವಿನಾಯಕ ಅವರಿಗೂ ಪೆಟ್ಟಾಗಿದೆ.
ಬಾಲಕನ ಮೇಲೆ ಬೀದಿ ನಾಯಿ ದಾಳಿ
ದಾಂಡೇಲಿ: ನಗರದ ಲೆನಿನ್ ರಸ್ತೆಯ ಕೆಪಿಸಿ ವಸತಿಗೃಹ ಪ್ರದೇಶ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಿಂಡೊoದು ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.
ಎಂಟು ವರ್ಷ ವಯಸ್ಸಿನ ಓಂವೀರ್ ಯೋಗೇಶ್ ಕುಮಾರ್ ನಾಯಿ ದಾಳಿಯಿಂದ ಗಾಯಗೊಂಡಿದ್ದಾನೆ. ಹತ್ತಿರದ ಅಂಗಡಿಗೆ ಹೋಗಿ ಹಿಂದಿರುಗಿ ಬರುತ್ತಿರುವ ಸಂದರ್ಭದಲ್ಲಿ ಏಕಾಏಕಿ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಸಂದರ್ಭದಲ್ಲಿ ಸ್ಥಳೀಯರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬೀದಿ ನಾಯಿಗಳು ಬಾಲಕನಿಗೆ ನಾಲ್ಕು ಕಡೆ ಕಚ್ಚಿದ್ದು, ತಕ್ಷಣವೇ ಆತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿಗೆ ಗುದ್ದಿದ ಟಿಪ್ಪರ್
ಅಂಕೋಲಾ: ಮುರುಡೇಶ್ವರ ಗರ್ಡಿಗದ್ದೆಯ ಶ್ರೀನಿವಾಸ ನಾರಾಯಣ ದೇವಾಡಿಗ (36) ಅವರ ಕಾರಿಗೆ ಕುಮಟಾ ಬಳಿಯ ಬರ್ಗಿಯಲ್ಲಿ ಟಿಪ್ಪರ್ ಗುದ್ದಿದೆ.
ಮಿರ್ಜಾನಿನ ಸಂತೋಷ ವೆಂಕಟ್ರಮಣ ಪಟಗಾರ ಟಿಪ್ಪರ್ ಗುದ್ದಿದ ಚಾಲಕ. ಇದರಿಂದ ಶ್ರೀನಿವಾಸ ದೇವಾಡಿಗ ಅವರ ಕಾರು ಜಖಂ ಆಗಿದ್ದು, ಅವರ ಕೈಗೆ ಪೆಟ್ಟಾಗಿದೆ. ಸೆ 14ರಂದು ನಡೆದ ಅಪಘಾತ ಇದಾಗಿದ್ದು, ಗೋಕರ್ಣ ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.