ಕಾರವಾರ: ನಗೆಕೋವೆಯ ನಾಯ್ಕವಾಡಾದಲ್ಲಿ ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಸೆ 13ರಂದು ಆಶಾ ಕಾರ್ಯಕರ್ತೆಯೂ ಆಗಿರುವ ಶ್ಯಾಮಲಾ ನಾಯ್ಕ ಊರಿನಲ್ಲಿದ್ದ ಸರ್ಕಾರಿ ಬಾವಿಗೆ ನೀರು ತರಲು ಹೋಗಿದ್ದರು. ಆದರೆ, ಬಾವಿಗೆ ಅಡ್ಡಲಾಗಿ ಮುಳ್ಳಿನ ಬೇಲಿ ನಿರ್ಮಿಸಿದ್ದರಿಂದ ನೀರು ತರಲು ಸಾಧ್ಯವಾಗಿರಲಿಲ್ಲ. ಮತ್ತೆ ಅಲ್ಲಿಗೆ ಹೋದ ಅವರು ಬೇಲಿ ತೆರವು ಮಾಡಿ ನೀರು ತರುತ್ತಿದ್ದರು. ಆಗ ಅವರ ಪಕ್ಕದ ಮನೆಯವರಾದ ಕೃಷ್ಣಾನಂದ ನಾಯ್ಕ, ಸಾಯಿನಾಥ ನಾಯ್ಕ, ಕಿರಣ ನಾಯ್ಕ, ಜಾನವಿ ನಾಯ್ಕ, ಜೀವನ ನಾಯ್ಕ, ಮಾಯಾ ನಾಯ್ಕ, ಪೂಜಾ ನಾಯ್ಕ ಹಾಗೂ ಮಹಾದೇವ ನಾಯ್ಕ ಎಂಬಾತರು ಅಡ್ಡಗಟ್ಟಿ ನೀರಿನ ಕೊಡವನ್ನು ಕಸಿದರು.
ಆ ಬಾವಿ ನೀರು ತಮ್ಮ ಆಸ್ತಿ ಎಂದು ಅವರು ವಾದಿಸಿದ್ದು, ಬಾವಿಯಲ್ಲಿದ್ದ ನೀರು ಪಡೆದ ಕಾರಣ ಶ್ಯಾಮಲಾ ನಾಯ್ಕ ಅವರಿಗೆ ಜಾಹ್ನವಿ ನಾಯ್ಕ ಮೊದಲು ಕಪಾಳಕ್ಕೆ ಬಾರಿಸಿದರು. ಅದಾದ ನಂತರ ಉಳಿದವರೆಲ್ಲ ಸೇರಿ ದೊಣ್ಣೆಯಿಂದ ಹೊಡೆದರು. ಇದನ್ನು ನೋಡಿದ ಶ್ಯಾಮಲಾ ಅವರ ಪತಿ ನಾರಾಯಣ ನಾಯ್ಕ ತಪ್ಪಿಸಲು ಬಂದಿದ್ದು, ಅವರು ಸಹ ಆರೋಪಿತರಿಂದ ಸಾಕಷ್ಟು ಒದೆ ತಿಂದರು.
`ಆ ಬಾವಿಯನ್ನು ನಾವು ಹಲವು ವರ್ಷಗಳಿಂದ ಬಳಸುತ್ತಿದ್ದೇವೆ. ಇದೀಗ ಕುಡಿಯುವ ನೀರಿಗೆ ಪಕ್ಕದಮನೆಯವರು ಅಡ್ಡಿಪಡಿಸಿದ್ದು, ನೀರು ತರಲು ಹೋದಾಗ ಹಲ್ಲೆ ನಡೆಸಿದ್ದಾರೆ\’ ಎಂದು ಶ್ಯಾಮಲಾ ಕುಟುಂಬದವರು ದೂರಿದ್ದಾರೆ. ಈ ಬಗ್ಗೆ ಮಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.