ಕಾರವಾರ: `ಮಾಜಾಳಿಯಿಂದ ಕಾರವಾರದವರೆಗಿನ ಕಡಲತೀರ ಸ್ವಚ್ಛತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿದಲ್ಲಿ ಅಶುಚಿತ್ವ ತಡೆಯಲು ಸಾಧ್ಯ\’ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಅವರು `ಎಲ್ಲಾ ಸರಕಾರಿ ಕಚೇರಿ, ಶೌಚಾಲಯಗಳು ಸ್ವಚ್ಛವಾಗಿರಬೇಕು. ಪ್ರತಿಯೊಬ್ಬರು ತಮ್ಮ ಮನೆ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು\’ ಎಂದು ಕರೆ ನೀಡಿದರು. ಈ ವೇಳೆ `ಸ್ವಚ್ಛತೆಯನ್ನು ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಲ್ಲಿ ಅನೈರ್ಮಲ್ಯ ಉಂಟಾಗುವುದನ್ನು ತಡೆಯಬಹುದು\’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
`ಹಸಿವಿಗೆ ಊಟ – ಜ್ಞಾನಕ್ಕೆ ಸಂಸ್ಕೃತ ಅನಿವಾರ್ಯ\’
ಯಲ್ಲಾಪುರ: `ಹಸಿವಿಗೆ ಊಟ ಬೇಕು. ಸಂಪೂರ್ಣ ಜ್ಞಾನಕ್ಕೆ ಸಂಸ್ಕೃತ ಬೇಕು\’ ಎಂದು ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಮಹೇಶ್ ಭಟ್ಟ ಪ್ರತಿಪಾದಿಸಿದ್ದಾರೆ.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ `ಅಸ್ಮಾಕಂ ಸಂಸ್ಕೃತ\’ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು `ಭಾರತೀಯ ಮೂಲ ಪರಂಪರೆ ಸಂಸ್ಕೃತದ ಹಿರಿಮೆ ಹೆಚ್ಚಿಸಿದೆ. ಅಂಥ ಪುಣ್ಯ ಭಾಷೆಯನ್ನು ನಾವೆಲ್ಲರೂ ಕಲಿಯಬೇಕು\’ ಎಂದವರು ಹೇಳಿದರು. `ವೇದ, ಭಗವದ್ಗೀತೆ, ಉಪನಿಷತ್ತುಗಳು, ಪುರಾಣಗಳೆಲ್ಲವೂ ಸಂಸ್ಕೃತದಲ್ಲಿದೆ. ಅವುಗಳ ಜ್ಞಾನಕ್ಕೆ ಸಂಸ್ಕೃತ ಅನಿವಾರ್ಯ\’ ಎಂದವರು ಪ್ರತಿಪಾದಿಸಿದರು.
ಸಂಸ್ಕೃತ ವಿಶ್ವವಿದ್ಯಾಲಯ ಪರಿವೀಕ್ಷಕ ಗಣಪತಿ ಗಾಂವ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, `ಸಂಸ್ಕೃತ ನಮ್ಮ ಅಸ್ಮಿತೆಯಾಗಿದೆ. ನಮ್ಮ ಸಂಸ್ಕೃತಿಯ ಉಳಿವಿಗೆ ಸಂಸ್ಕೃತ ಅನಿವಾರ್ಯ\’ ಎಂದರು. ಪ್ರಮುಖರಾದ ಉಮೇಶ ಭಾಗ್ವತ, ಶಂಕರ ಭಟ್ಟ ತಾರೀಮಕ್ಕಿ, ಮುಕ್ತಾ ಶಂಕರ್ ಶಿವಮೂರ್ತಿ ಹೆಗಡೆ ಇದ್ದರು. ಶ್ರೀಹರಿ ಭಟ್ಟ ವೇದಘೋಷ ಪಠಿಸಿದರು. ಆದಿತ್ಯ ಭಟ್ಟ ನಿರ್ವಹಿಸಿದರು. ನರಸಿಂಹ ಭಟ್ಟ ಸ್ವಾಗತಿಸಿದರು. ಶಿವರಾಮ್ ಭಾಗ್ವತ ವಂದಿಸಿದರು.
ವಿಶ್ವಕರ್ಮ ಸಮಾಜಕ್ಕೆ ಸಿಕ್ಕಿಲ್ಲ ಸರ್ಕಾರದ ಮನ್ನಣೆ
ಕಾರವಾರ: `ವಿಶ್ವಕರ್ಮನನ್ನು ಬ್ರಹ್ಮಾಂಡದ ಸೃಷ್ಠಿಕರ್ತ ಮತ್ತು ಪ್ರಪಂಚದ ಮೊದಲ ವಾಸ್ತುಶಿಲ್ಪಿ ಎಂದು ಕರೆಯಲಾಗುತ್ತದೆ. ಬ್ರಹ್ಮನ ಆಜ್ಞೆಯ ಮೇರೆಗೆ ವಿಶ್ವಕರ್ಮನು ಜಗತ್ತನ್ನು ಸೃಷ್ಠಿಸಿದವನು ಎಂದು ನಂಬಲಾಗಿದ್ದು ಅವರು ಕೌಶಲ್ಯದ ಸೃಷ್ಟಿಕರ್ತರು\’ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಶಿವನ ತ್ರಿಶೂಲ, ವಿಷ್ಣುವಿನ ಸುದರ್ಶನ, ರಾವಣನ ಲಂಕಾ ಮತ್ತು ಪುಷ್ಪಕ ವಿಮಾನ, ಜಗನ್ನಾಥಪುರಿ, ವಾದ್ಯಗಳ ನಿರ್ಮಾಣ, ವಿಮಾನ ವಿದ್ಯೆ, ದೇವತೆಗಳ ಸ್ವರ್ಗ, ಹಸ್ತಿನಾಪುರ, ಕೃಷ್ಣನ ದ್ವಾರಕೆ, ಇಂದ್ರಪುರಿ ಮೊದಲಾದ ದೇವರುಗಳು ಬಳಸುವ ಆಯುಧಗಳನ್ನು ಸ್ವತಃ ವಿಶ್ವಕರ್ಮರು ಸಿದ್ಧಪಡಿಸಿದ್ದರು\’ ಎಂದರು.
ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ತಿನ ರಾಜ್ಯ ಉಪಧ್ಯಾಕ್ಷ ರಾಘವೇಂದ್ರ ಆಚಾರ್ಯ ವಿಶ್ವಕರ್ಮನ ಕುರಿತು ವಿಶೇಷ ಉಪನ್ಯಾಸ ನೀಡಿ `ಸನಾತನ ಧರ್ಮ, ಸಂಸ್ಕೃತಿ, ವಿಶ್ವಕರ್ಮರವರಿಂದ ಜಾಗೃತೆಯಾಗಿದೆ. ಪಂಚ ಕಸುಬು ನಿರ್ಮಿಸುತ್ತಿರು ವಿಶ್ವಕರ್ಮ ಸಮಾಜಕ್ಕೆ ಸೂಕ್ತ ಸೌಲಭ್ಯಗಳು ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ ಅನೇಕ ಶಿಲ್ಪಿಗಳು ಇದ್ದು, ಅವರನ್ನು ಗುರುತಿಸುವ ಕೆಲಸವಾಗಬೇಕು\’ ಎಂದರು.
ಮಕ್ಕಳ ಬೆಳವಣಿಗೆಗೆ ಕ್ರೀಡೆ ಪೂರಕ
ಯಲ್ಲಾಪುರ: `ಮಗುವಿನ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಪೂರಕ\’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಮಂಗಳವಾರ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಅವರು ಮಾತನಾಡಿದ್ದು, `ಪ್ರತಿಯೊಬ್ಬ ಮಕ್ಕಳು ತಮಗೆ ಇಷ್ಟವಾದ ಕ್ರೀಡೆಯಲ್ಲಿ ಭಾಗವಹಿಸಬೇಕು. ಲವಲವಿಕೆಯ ಜೀವನ ನಡೆಸಲು ಕ್ರೀಡೆ ಅಗತ್ಯ\’ ಎಂದರು. ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ, ದೈಹಿಕ ಪರಿವಿಕ್ಷಕ ಪ್ರಕಾಶ ತಾರೀಕೊಪ್ಪ ಇತರರು ಇದ್ದರು.
ಪೊಲೀಸ್ ನೇಮಕಾತಿ: ಆಯ್ಕೆ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?
ಕಾರವಾರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2022-23ರ ಸಶಸ್ತ ಕಾನ್ಸ್ಟೇಬಲ್ (ಸಿಎಆರ್/ಡಿಎಆರ್) ಪುರುಷ ಮತ್ತು ತೃತೀಯ ಲಿಂಗ-3064 ನೇಮಕಾತಿ ಕುರಿತು ಮುಖ್ಯ ಪ್ರಕಟಣೆ ಹೊರಡಿಸಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕಕ್ಕೆ ಹಂಚಿಕೆಯಾದ 80 ಸಶಸ್ತ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬoಧಿಸಿದoತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೆ 12ರಂದು ಹೊರಡಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಾರವಾರ ಜಿಲ್ಲಾ ಪೊಲೀಸ್ ಕಚೇರಿಯ ನಾಮಫಲಕದಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಂತರ್ಜಾಲ ತಾಣ: https://uttarakannadapolice.karnataka.gov.in ದಲ್ಲಿ ಸಹ ಆಯ್ಕೆ ಪಟ್ಟಿ ಪರಿಶೀಲಿಸಬಹುದು.
ಕೃಷ್ಣನ ವೇಷ ತೋಡಿಸುವವರೇ ಎಲ್ಲ: ಚಿಣ್ಣರಿಗೆ ಕೃಷ್ಣನ ಆದರ್ಶ ಹೇಳುವವರಾರು?
ಯಲ್ಲಾಪುರ: `ವಿಶ್ವ ಹಿಂದೂ ಪರಿಷತ್ನ ಚಟುವಟಿಕೆಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತದೆ\’ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.
ಶಕ್ತಿಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಷಷ್ಠಿ ಪೂರ್ತಿ ಕಾಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು `ಮಾನವೀಯ ಸಂಬoಧಗಳು ಹಳಸುತ್ತಿದೆ. ಕುಟುಂಬದಲ್ಲಿ ಸಂಬoಧದ ಭಾವನೆ ಮೂಡಿಸುವುದಕ್ಕಾಗಿ ವಿಶ್ವ ಹಿಂದೂ ಪರಿಷತ್ ಕುಟುಂಬ ಪ್ರಭೋದನ ಎಂಬ ಕಾರ್ಯಕ್ರಮ ನಡೆಸುತ್ತಿದೆ\’ ಎಂದರು.
ಜಿಲ್ಲಾ ಉಪಾಧ್ಯಕ್ಷ ನಾರಾಯಣ ನಾಯ್ಕ ಮಾತನಾಡಿ `ಹಿಂದೂ ಸಂಪ್ರದಾಯದ ಹಬ್ಬಗಳನ್ನು ಪ್ರತಿಮನೆಗಳಲ್ಲಿ ಆಚರಿಸಬೇಕು. ಕೃಷ್ಣಾಷ್ಟಮಿಯಂದು ಮಕ್ಕಳನ್ನು ಅಲಂಕರಿಸುವಲ್ಲಿ ಸಂಭ್ರಮಿಸುವ ಪಾಲಕರು ಕೃಷ್ಣನ ಆದರ್ಶಗಳ ಬಗ್ಗೆಯೂ ತಿಳಿಸಬೇಕು\’ ಎಂದರು.
ಸoಘಟನೆ ಜಿಲ್ಲಾ ಖಜಾಂಚಿ ನಾಗರಾಜ ಮದ್ಗುಣಿ ಮಾತನಾಡಿ `ನಾವು ನಮ್ಮ ಮಕ್ಕಳಲ್ಲಿ ಸಂಸ್ಕಾರವನ್ನು ನೀಡುವಲ್ಲಿ ಹಿಂದೆ ಬೀಳುತ್ತಿದ್ದೇವೆ. ಇದೇ ಹಿಂದೂ ಸಂಘಟನೆ ಬಲಗೊಳ್ಳದಿರಲು ಕಾರಣ\’ ಎಂದರು. ಪ್ರಮುಖರಾದ ಶ್ಯಾಮಿಲಿ ಪಾಠನಕರ್, ಗಜಾನನ ನಾಯ್ಕ, ಉಷಾ ಗಾಂವ್ಕರ್, ಅನಂತ ಗಾಂವ್ಕರ್ ಇದ್ದರು.
ಹೊನ್ನಾವರಕ್ಕೆ ನಾಳೆ ವಿದ್ಯುತ್ ಇಲ್ಲ
ಹೊನ್ನಾವರ: ಸೆ 18ರಂದು ಹೊನ್ನಾವರದ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
33/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರ ಹಾಗೂ ಗೇರುಸೋಪ್ಪದಲ್ಲಿ 33 ಕೆ.ವಿ
ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮಾರ್ಗಗಳ ನಿರ್ವಹಣಾ ಕಾರ್ಯ ಬುಧವಾರ ನಡೆಯಲಿದೆ. ಹೀಗಾಗಿ ಉಪ್ಪೋಣಿ ಫೀಡರುಗಳಲ್ಲಿ ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 3.30 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ಬರ್ಮಾ ಅಡಿಕೆ ಕಲಬೆರಿಕೆ: ವೈಯಕ್ತಿಕ ಹಿತಕ್ಕೆ ರೈತರ ಬಲಿ ಬೇಡ
ಶಿರಸಿ: `ಅಡಿಕೆ ವ್ಯಾಪಾರಸ್ಥರು ನಿಯತ್ತಿನ ವ್ಯಾಪಾರ ನಡೆಸದಿದ್ದರೆ ರೈತರ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ. ಬರ್ಮಾ ದೇಶದ ಅಡಿಕೆ ಕಲಬೆರಿಕೆ ಮಾಡಿರುವುದು ತಪ್ಪು\’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
`ವ್ಯಾಪಾರಸ್ಥರು ಸಹ ರೈತ ಮೂಲದಿಂದ ಬಂದವರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಗೊಸ್ಕರ ರೈತರನ್ನು ಬಲಿ ಕೊಡಬಾರದು\’ ಎಂದವರು ಹೇಳಿದರು. `ವಿದೇಶಿ ಅಡಿಕೆ ಅಕ್ರಮವಾಗಿ ತಂದು ಇಲ್ಲಿನ ಅಡಿಕೆ ಜತೆ ಬೆರಿಕೆ ಮಾಡಿರುವ ವ್ಯಾಪಾರಸ್ಥರನ್ನು ವ್ಯಾಪಾರಿ ಸಂಘಟನೆಗಳು ದೂರ ಇಡಬೇಕು\’ ಎಂದು ಹೇಳಿದರು.