ಅಂಕೋಲಾ: ವಿಜ್ಞಾನ ವಿಷಯವಾಗಿ ಅರಿವು ಮೂಡಿಸುತ್ತಿರುವ ಶಿಕ್ಷಕ ಎಂ ರಾಜಶೇಖರ ನಂದೂಳ್ಳಿ ಅವರ ಸೇವೆ ಗುರುತಿಸಿದ ಲಯನ್ಸ ಕ್ಲಬ್ ಅವರನ್ನು ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕಳೆದ 22 ವರ್ಷಗಳಿಂದ ಯಲ್ಲಾಪುರದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ ಎಂ ರಾಜಶೇಖರ್ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅಕ್ಷದವ್ವ ಸಾವಿತ್ರಿಬಾಯಿ ಪುಲೆ ನೆನಪಿನಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಂಚಾಲಕರಾಗಿರುವ ಅವರು ಜಿಲ್ಲೆಗೆ 15ಕ್ಕೂ ಅಧಿಕ ವಿಜ್ಞಾನಿಗಳನ್ನು ಕರೆತಂದು ಅವರ ಮೂಲಕ ಮಕ್ಕಳಿಗೆ ಪಾಠ ಮಾಡಿಸಿದ್ದಾರೆ.
ಪ್ರತಿ ವರ್ಷ ನಡೆಯುವ ವಿಜ್ಞಾನ ಸಮಾವೇಶ, ರಸಪ್ರಶ್ನೆ, ಯುವ ವಿಜ್ಞಾನಿ ಮೊದಲಾದ ಕಾರ್ಯಕ್ರಮಗಳಲ್ಲಿ ರಾಜಶೇಖರ್ ಅವರ ಪಾತ್ರ ದೊಡ್ಡದು. ಮನೆ ಮನೆಗೆ ವಿಜ್ಞಾನ ಎಂಬ ನಿಟ್ಟಿನಲ್ಲಿ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜ್ಞಾನ ಪುಸ್ತಕಗಳನ್ನು ಬಹುಮಾನ ಕೊಡುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳು ನೂರಾರು.
ಶಾಲೆ ಬಿಡುವವರ ಸಂಖ್ಯೆ ಹೆಚ್ಚಿರುವ ಬುಡಕಟ್ಟು ಸಮುದಾಯದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಲ್ಲಿಯೂ ಎಂ ರಾಜಶೇಖರ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ.

ಎಂ ರಾಜಶೇಖರ್ ಅವರ ಕುರಿತು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಬರಹ
ಶಿಕ್ಷಣ ಇಲಾಖೆಯ ಎಲ್ಲಾ ವಿಜ್ಞಾನದ ಕಾರ್ಯಕ್ರಮಗಳನ್ನು ಅವರು ನಿರ್ವಹಿಸುತ್ತಾರೆ. ಚುನಾವಣೆಯಲ್ಲಿ ಚುನಾವಣಾ ಸಹಾಯಕ ಅಧಿಕಾರಿಯಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಕೊರೊನಾ ವಾರಿಯರ್ ಆಗಿ ನಂದೂಳ್ಳಿ ಪಂಚಾಯತ ವ್ಯಾಪ್ತಿಯ ಜನರಿಗೆ ಔಷಧಿಗಳನ್ನು ಪೂರೈಸಿದ್ದರು. ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.