
ಭಟ್ಕಳ: ಎಲ್ಲಾ ಕಡೆ 1ರೂಪಾಯಿಗೆ 80 ರೂ ನೀಡುವುದಾಗಿ ಮಟ್ಕಾ ಚೀಟಿ ಪಡೆದರೆ ಮುರುಡೇಶ್ವರದಲ್ಲಿ 1 ರೂಪಾಯಿಗೆ 70 ರೂ ಕೊಡುವುದಾಗಿ ತಿಳಿಸಿ ಇಬ್ಬರು ಮಟ್ಕಾ ಆಡಿಸುತ್ತಿದ್ದರು. ಕಾನೂನುಬಾಹಿರ ಜೂಜಾಟದಲ್ಲಿಯೂ ಮೋಸ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದರು!
ಪಿಎಸ್ಐ ಹಣವಂತ ಬೀರಾದರ ದಾಳಿಯ ನೇತ್ರತ್ವವಹಿಸಿದ್ದು, ಕಿರಣ ಸೋಮಯ್ಯ ನಾಯ್ಕ ಹಾಗೂ ಸಂಜಯ್ಯ ಕುಪ್ಪಯ್ಯ ಬಾಕಡ ಎಂಬಾತರ ಬಳಿಯಿದ್ದ ಜೂಜಾಟದ ಪರಿಕ್ಕರಗಳನ್ನು ವಶಕ್ಕೆ ಪಡೆದರು. ಈ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದರು. ಅಧಿಕ ಹಣಗಳಿಸುವ ಆಸೆಯಿಂದ ಜೂಜಾಟಕ್ಕೆ ಇಳಿದಿದ್ದರು. ಸೆ 17ರಂದು ಶಿರಾಲಿ ಬಳಿಯ ಚಿತ್ರಾಪುರದ ಕಿರಣ ನಾಯ್ಕ ಮಾವಿನಕಟ್ಟಾ ತಟ್ಟಿಹಕ್ಲದ ಬಳಿ ಹಾಗೂ ಬಪ್ಪನಕೊಡ್ಲುವಿನ ಸಂಜಯ್ಯ ಬಾಕಡ್ ಮುರುಡೇಶ್ವರ ರಸ್ತೆ ಅಂಚಿನಲ್ಲಿ ಜೂಜಾಟ ನಡೆಸುತ್ತಿದ್ದಿದ್ದಾಗ ಸಿಕ್ಕಿಬಿದ್ದರು.
ಕಿರಣ ನಾಯ್ಕ ಬಳಿ ಜನರಿಂದ ಸಂಗ್ರಹಿಸಿದ್ದ 3100ರೂ ಹಾಗೂ ಸಂಜಯ್ಯ ಬಾಕಡ ಬಳಿ 2090ರೂ ಸಿಕ್ಕಿದೆ. ಇದರೊಂದಿಗೆ ಓಸಿ ಬರೆಯಲು ಬಳಸಿದ್ದ ಚೀಟಿ ಹಾಗೂ ಪೆನ್ನುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.