ಶಿರಸಿ: ಸಂಚರಿಸುತ್ತಿದ್ದ ಪಿಕಪ್ ವಾಹನದಿಂದ ಕೆಳಗೆ ಬಿದ್ದ ಜನರೆಟರ್ ಸತ್ಯನಾರಾಯಣ ಗಣಪತಿ ಅಂಬಿಗ ಎಂಬಾತರಿಗೆ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ.
ವಿನಾಯಕ ಮಂಜುನಾಥ ನಾಯ್ಕ ಎಂಬಾತರಿಗೆ ಜನರೇಟರ್ ಅಗತ್ಯವಿದ್ದ ಕಾರಣ ಬಾಪೂಜಿ ನಗರದ ರಾಘವೇಂದ್ರ ರವಿ ಮಡಿವಾಳ ಒಡೆತನದ ಮಹೇಂದ್ರ ಬುಲೆರೋದಲ್ಲಿ ಜನರೇಟರ್ ಸಾಗಿಸಲಾಗುತ್ತಿತ್ತು. ಚಾಲಕ ದರ್ಶನ ಪ್ರಕಾಶ ಮಡಿವಾಳ ಎಂಬಾತರು ವಾಹನಕ್ಕೆ ಜನರೇಟರ್ ಕಟ್ಟಿಕೊಂಡು ಸಂಚರಿಸುತ್ತಿದ್ದರು. ಕೆಎಸ್ಆರ್ಟಿಸಿ ಡಿಪೋ ಬಳಿ ಸಂಚರಿಸುತ್ತಿದ್ದಾಗ ವಾಹನದಿಂದ ಜನರೇಟರ್ ಟ್ರಾಲಿ ಕೆಳಗೆ ತಪ್ಪಿದ್ದು, ಅಲ್ಲಿ ನಡೆದು ಹೋಗುತ್ತಿದ್ದ ಸತ್ಯನಾರಾಯಣ ಗಣಪತಿ ಅಂಬಿಗ ಎಂಬಾತರಿಗೆ ಜನರೇಟರ್ ಗುದ್ದಿದೆ.
ಅಪಘಾತದ ವಿಷಯ ಅರಿತರೂ ಗಣೇಶ ನಗರದ ಚಾಲಕ ದರ್ಶನ ಮಡಿವಾಳ ವಾಹನ ನಿಲ್ಲಿಸಿಲ್ಲ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಮಾಡಿಲ್ಲ. ಈ ಹಿನ್ನಲೆ ದರ್ಶನ ಮಡಿವಾಳ, ರವಿ ಮಡಿವಾಳ, ವಿನಾಯಕ ಮಂಜುನಾಥ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.