ಯಲ್ಲಾಪುರ: ಟಿ ಎಂ ಎಸ್ ವಾರ್ಷಿಕ ಸಭೆ ನಡೆದ ಪ್ರದೇಶದಲ್ಲಿ ನಾಗರ ಹಾವು ಸಾವನಪ್ಪಿರುವುದು ಸತ್ಯ. ಆದರೆ, ಈ ವಿಷಯವಾಗಿ ಹುಟ್ಟಿಕೊಂಡಿರುವ ಊಹಾಪೋಹಗಳಲ್ಲಿನ ಎಲ್ಲಾ ವಿಷಯಗಳು ಸತ್ಯವಲ್ಲ. ಹೀಗಾಗಿ ಜನ ಆತಂಕ ಪಡಬೇಕಾಗಿಲ್ಲ.
ಸೆ 19ರಂದು ಟಿ ಎಂ ಎಸ್ ವಾರ್ಷಿಕ ಸಭೆ ನಡೆಯಿತು. ಸಾವಿರಾರು ಜನ ಈ ಸಭೆಗೆ ಸಾಕ್ಷಿಯಾಗಿದ್ದರು. ಸಭೆಯನ್ನು ಅದ್ಧೂರಿಯಾಗಿ ನಡೆಸಬೇಕು ಎಂಬ ನಿಟ್ಟಿನಲ್ಲಿ ದೊಡ್ಡ ದೊಡ್ಡ ಪೆಂಡಾಲ್\’ಗಳನ್ನು ಹಾಕಲಾಗಿತ್ತು. ನೆಲಕ್ಕೆ ಹಾಸಿದ ಮ್ಯಾಟ್ ಅಡಿಭಾಗದಲ್ಲಿ ನಾಗರ ಹಾವೊಂದು ಅಡಗಿ ಕೂತಿದ್ದು, ಸಭೆ ಮರುದಿನ ಆ ಹಾವು ಅಲ್ಲಿಯೇ ಸಾವನಪ್ಪಿರುವುದು ಗೊತ್ತಾಯಿತು. ಜನರ ಕಾಲ್ತುಳಿತಕ್ಕೆ ಒಳಗಾಗಿ ಆ ಹಾವು ಸಾವನಪ್ಪಿದ ಶಂಕೆಯಿದ್ದು, ನಾಗರ ಹಾವಿನ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು.
ಟಿ ಎಂ ಎಸ್ ಸಭೆಯಲ್ಲಿ ಸಾಧಕ ರೈತರಿಗೆ ಸನ್ಮಾನಿಸಲಾಗಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಈ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ್ದರು. ಈ ಸನ್ಮಾನದ ನಂತರ `ಪಾಪಣ್ಣ ವಿಜಯ\’ ಎಂಬ ಯಕ್ಷಗಾನ ಸಹ ನಡೆದಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಹಾಗೂ ಗಣ್ಯರ ಜೊತೆ ಅವರ ಬೆಂಬಲಿಗರಲ್ಲಿಯೂ ಆತಂಕ ಸೃಷ್ಠಿಯಾಗಿದೆ. ಘಟನೆ ನಡೆದ ವಾರದ ನಂತರ ಹಾವು ಸಾವನಪ್ಪಿದ ವಿಷಯಕ್ಕೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡಿದ್ದು ಸೆ 25 ಹಾಗೂ ಅದರ ಆಜುಬಾಜು ದಿನಗಳಲ್ಲಿ ನಡೆದ ವಿವಿಧ ಸೊಸೈಟಿ ಸರ್ವಸಾಧಾರಣ ಸಭೆಗೆ ಬಂದವರು ನಾಗದೋಷದ ಬಗ್ಗೆಯೇ ಮಾತನಾಡುತ್ತಿದ್ದರು. `ಆ ಹಾವು ಅಷ್ಟು ದೊಡ್ಡ ಇತ್ತು.. ಇಷ್ಟು ದಪ್ಪ ಇತ್ತು.. ಈ ಕಾರಣಕ್ಕಾಗಿಯೇ ಹೀಗಾಯಿತು.. ಆ ಕಾರಣದಿಂದ ಹಾಗಾಯಿತು..\’ ಎಂಬ ಗಾಳಿ ಸುದ್ದಿಗಳು ದಟ್ಟವಾಗಿ ಹರಡಿದೆ. ಆದರೆ, ಅದ್ಯಾವುದು ಸತ್ಯವಲ್ಲ.
`ಆರು ಅಡಿ ಗಾತ್ರದ ಮ್ಯಾಟಿನ ಅಡಿಭಾಗದಲ್ಲಿ ಅಂದಾಜು 1.5 ಅಡಿ ಉದ್ದದ ನಾಗರ ಹಾವು ಸಾವನಪ್ಪಿದೆ. ಮ್ಯಾಟನ್ನು ಸ್ವಚ್ಛಗೊಳಿಸಿಯೇ ತರಲಾಗಿತ್ತು. ವಾಹನಕ್ಕೆ ಮ್ಯಾಟ್ ಹಾಕುವಾಗ, ಲಿಪ್ಟ ಮೇಲೆ ಸಾಗಿಸುವಾಗ ಹಾಗೂ ಮ್ಯಾಟ್ ಬಿಡಿಸುವಾಗಲೂ ಹಾವು ಕಾಣಿಸಿರಲಿಲ್ಲ. ಮರುದಿನ ಹಾವು ಸಾವನಪ್ಪಿದ್ದು ಗೊತ್ತಾಗಿದೆ\’ ಎಂದು ಪೆಂಡಾಲ್ ಅಳವಡಿಸುವವರು ತಿಳಿಸಿದರು. ವೇದಿಕೆ ಮುಂಭಾಗ ಕೊಂಚ ಜಾಗ ಬಿಟ್ಟು ಖುರ್ಚಿ ಅಳವಡಿಸಿದ್ದ ಸ್ಥಳದಲ್ಲಿ ಹಾವಿನ ಕಳೆಬರ ಸಿಕ್ಕಿದ್ದು, `ವೇದಿಕೆಯ ಮೇಲೆ ಹಾವು ಸತ್ತಿದೆ\’ ಎಂಬುದು ವದಂತಿ ಮಾತ್ರ.
ಇದನ್ನೂ ಓದಿ: ಟಿ ಎಂ ಎಸ್ ಅಧ್ಯಕ್ಷ-ಉಪಾಧ್ಯಕ್ಷರಿಗೆ ಬಂಪರ್ ಲಾಟರಿ!
ಸರ್ಪ ಸಾವನಪ್ಪಿದ ವಿಷಯ ತಿಳಿದ ತಕ್ಷಣ ಟಿ ಎಂ ಎಸ್ ಆಡಳಿತ ಮಂಡಳಿಯವರು ಜ್ಯೋತಿಷಿಗಳ ಸಲಹೆ ಪಡೆದಿದ್ದಾರೆ. ಹಿತ್ಲಳ್ಳಿ ನಾಗೇಂದ್ರ ಭಟ್ಟರು ಸಮಸ್ಯೆ ಅರಿತು ಅದಕ್ಕೆ ಪರಿಹಾರವನ್ನು ಸೂಚಿಸಿದ್ದಾರೆ. ಈ ಹಿನ್ನಲೆ ಸರ್ವ ಸದಸ್ಯರು ಹಾಗೂ ಗಣ್ಯರ ದೋಷ ನಿವಾರಣೆಗಾಗಿ ಟಿ ಎಂ ಎಸ್ವತಿಯಿಂದಲೇ ಧಾರ್ಮಿಕ ಕಾರ್ಯಕ್ರಮ ಹಾಗೂ ಸರ್ಪ ಸಂಸ್ಕಾರ ನಡೆಸಲು ಉದ್ದೇಶಿಸಲಾಗಿದೆ. ಈ ವಿಷಯವಾಗಿ ಚರ್ಚಿಸಲು ಸೆ 28ರಂದು ಸಭೆಯೂ ಜರುಗಲಿದೆ.