ಶಿರೂರು ಗುಡ್ಡ ಕುಸಿತದಿಂದ ನದಿ ಪಾಲಾದ ಲಾರಿ ಚಾಲಕ ಅರ್ಜುನ ತನ್ನ ಮಗನಿಗಾಗಿ ಆಟಿಕೆಯ ಲಾರಿ ಖರೀದಿಸಿದ್ದ. ಕೊನೆಯದಾಗಿ ಮಗನ ಜೊತೆ ಫೋನಿನಲ್ಲಿ ಮಾತನಾಡಿದಾಗ ಸಹ ಆತ ಆಟಿಕೆ ತರುವುದಾಗಿ ಹೇಳಿಕೊಂಡಿದ್ದ. ನದಿ ಪಾಲಾದ ದೊಡ್ಡ ಲಾರಿಯ ಜೊತೆ ಆ ಆಟಿಕೆಯ ಲಾರಿ ಸಹ ನೀರಿನ ಆಳ ಸೇರಿದ್ದು, ಅವಶೇಷಗಳ ಜೊತೆ ಆಟಿಕೆ ಸಹ ಹೊರಗೆ ಬಂದಿದೆ.
ಜುಲೈ 16ರ ಬೆಳಗ್ಗೆ 8.30ರ ಆಸುಪಾಸಿಗೆ ಶಿರೂರು ಗುಡ್ಡ ಕುಸಿದಿತ್ತು. ಗುಡ್ಡದ ತಪ್ಪಲಿನಲ್ಲಿದ್ದ 8 ಜನ ಸಾವನಪ್ಪಿದ್ದು, ಮೂವರು ಕಣ್ಮರೆಯಾಗಿದ್ದರು. ಆ ಪೈಕಿ ಈವರೆಗೂ ಇಬ್ಬರ ಸುಳಿವು ಸಿಕ್ಕಿಲ್ಲ. ಈ ನಡುವೆ ಕಣ್ಮರೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನನ ಶವ ಮೊನ್ನೆ ನದಿ ಆಳದಿಂದ ಹೊರ ತೆಗೆಯಲಾಗಿದೆ. ಜೊತೆಗೆ ಆತ ಓಡಿಸುತ್ತಿದ್ದ ಲಾರಿಯ ಅವಶೇಷಗಳು ಸಹ ಸಿಕ್ಕಿದೆ. ಆ ಅವಶೇಷಗಳೊಂದಿಗೆ ಅರ್ಜುನನ ಮೊಬೈಲ್ ಮತ್ತು ಆತ ಮಗನಿಗಾಗಿ ಖರೀದಿಸಿದ ಪುಠಾಣಿ ಲಾರಿಯೂ ದೊರೆತಿದೆ.
ಅರ್ಜುನನ ಸುಳಿವು ನೀಡಿದ ಮಹತ್ವ ಸಾಕ್ಷಿಗಳಲ್ಲಿ ಆ ಮೊಬೈಲ್ ಸಹ ಒಂದಾಗಿದ್ದು, ಕೇರಳ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಹೆದ್ದಾರಿಯ ಮೇಲೆ ಮೊಬೈಲ್ ಸಿಗ್ನಲ್ ಕೊನೆಯಾಗಿತ್ತು. ಈ ನಿಟ್ಟಿನಲ್ಲಿ ಲಾರಿ ಹೆದ್ದಾರಿ ಮೇಲೆ ಇದೆ ಎಂದು ಭಾವಿಸಿ ಅಲ್ಲಿನ ಮಣ್ಣು ತೆರವಿಗೆ ಒತ್ತು ನೀಡಲಾಗಿತ್ತು. ಆದರೆ, ಮೊಬೈಲ್ ಸಿಗ್ನಲ್ ಕೊನೆಯಾದ ನಂತರ ಲಾರಿ ನದಿ ಆಳಕ್ಕೆ ಮುಳುಗಿದ್ದು, ಇದೀಗ ಲಾರಿ ಅವಶೇಷಗಳ ಜೊತೆ ಮೊಬೈಲ್ ಸಿಕ್ಕಿರುವುದರಿಂದ ಮುಂದಿನ ತನಿಖೆಗೆ ಅದು ಮಹತ್ವದ ಸಾಕ್ಷಿಯಾಗಲಿದೆ.
ನದಿ ಆಳದಲ್ಲಿದ್ದ ಲಾರಿ ಕ್ಯಾಬಿನಿನಲ್ಲಿ ಅರ್ಜುನನ ಶವ ಸಿಕ್ಕಿದ್ದು, ಅದರ ಪಕ್ಕದಲ್ಲಿಯೇ ಆಟಿಕೆಯ ಲಾರಿ ಸಹ ದೊರೆತಿದೆ. ಆ ಆಟಿಕೆಯನ್ನು ಅರ್ಜುನನ ಸಹೋದರ ಅಭಿಜಿತ್ ಪಡೆದಿದ್ದಾರೆ.