ದೆಹಲಿಯಿಂದ ಹುಬ್ಬಳ್ಳಿಗೆ ಶುಕ್ರವಾರ ವಿಮಾನದಲ್ಲಿ ಬಂದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿಂದ ನೇರವಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಅಧಿಕಾರಿಗಳ ಸಭೆ ನಡೆಸಿದ ಅವರು ಮುಂದೆ ತಮ್ಮ ಕಾರಿನಲ್ಲಿ ಶಿರಸಿಗೆ ಪ್ರಯಾಣ ಮಾಡಿದರು.
ರೈಲ್ವೆ ನಿಗಮದಲ್ಲಿ ಉತ್ತರ ಕನ್ನಡ ರೈಲು ಯೋಜನೆಗಳ ಸ್ಥಿತಿ-ಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈಲ್ವೆ ನಿಗಮದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಪ್ರಗತಿಯ ಕುರಿತು ವಿವರಿಸಿದರು. ಹುಬ್ಬಳ್ಳಿ – ತಾಳಗುಪ್ಪ ರೈಲ್ವೆ ಹಳಿಯ ಅಂತಿಮ ಸ್ಥಳ ಸಮೀಕ್ಷೆ ಕುರಿತು ಸುದೀರ್ಘ ಚರ್ಚೆ ಮಾಡಿದರು. ಈ ವೇಳೆ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲನ್ನು ಕಾರವಾರದವರೆಗೂ ವಿಸ್ತರಿಸುವ ಬಗ್ಗೆ ಸೂಚಿಸಿದ್ದು, ಅದರ ಕಡತಗಳನ್ನು ಪರಿಶೀಲಿಸಿದರು. ಬೆಳಗಾವಿಯ ಖಾನಾಪುರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಜನರ ಬೇಡಿಕೆಗಳಿರುವುದನ್ನು ನಿಗಮದ ಗಮನಕ್ಕೆ ತಂದರು.
ಹುಬ್ಬಳ್ಳಿ-ಅoಕೋಲಾ ನಡುವಿನ ರೈಲ್ವೆ ಪ್ರಗತಿಯ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು. ಲೋಂಡಾ ಹಾಗೂ ಕ್ಯಾಸಲ್ ರಾಕ್\’ಗಳಲ್ಲಿನ ರೈಲ್ವೆ ನಿಲ್ದಾಣಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಧಾರವಾಡ – ದಾಂಡೇಲಿ ನಡುವೆ ರೈಲು ಸೇವೆ ಪುನರಾರಂಭಿಸಲು ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದರು. ತಾಳಗುಪ್ಪ – ಹೊನ್ನಾವರ ನಡುವಿನ ರೈಲ್ವೆ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು.