ಶಿರಸಿ: ಗುಡ್ಡೆಕೊಪ್ಪಾ ಪಾರೆಸ್ಟ ಚೆಕ್ಪೋಸ್ಟಿನಲ್ಲಿ ವಾಚ್ಮೇನ್ ಆಗಿ ಕೆಲಸ ಮಾಡುವ ಚನ್ನಪ್ಪ ಬಸಪ್ಪ ಪಾಟೀಲ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಯಲ್ಲಾಪುರ ನ್ಯಾಯಾಲಯ ಈ ಪ್ರಕರಣವನ್ನು ಶಿರಸಿ ಪೊಲೀಸರಿಗೆ ವರ್ಗಾಯಿಸಿದೆ.
ತಾರಗೋಡು ಸದಾಶಿವಳ್ಳಿಯ ಚೆನ್ನಪ್ಪ ಪಾಟೀಲ ಅವರನ್ನು ಮಾರ್ಚ 13ರಂದು ನಾಲ್ವರು ಅಪರಿಚಿತರು ಅಪಹರಿಸಿದ್ದರು. ಗೋಳಿಕೊಪ್ಪ ರಸ್ತೆ ಮೂಲಕ ಯಲ್ಲಾಪುರ ರಸ್ತೆಗೆ ಅವರನ್ನು ಕಾರಿನಲ್ಲಿ ತುಂಬಿಕೊoಡು ಬಂದ ನಾಲ್ವರು ಕೊಕ್ಕಾರ ಕ್ರಾಸಿನ ಒಳಗಡೆಯ ಕಾಡು ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಹಲ್ಲೆ ನಡೆಸಿದ್ದರು. ನಾಲ್ವರು ಅಪರಿಚಿತರ ಜೊತೆ ಮಾವಿನಕಟ್ಟಾದ ಗಣೇಶ ವಡ್ಡರ್ ಹಾಗೂ ತಾರಗೋಡಿನ ಉದಯ ದೇವಾಡಿಗ ಸಹ ಅಲ್ಲಿಗೆ ಆಗಮಿಸಿ ದೊಣ್ಣೆ ಹಾಗೂ ಕೋಲಿನಿಂದ ಹೊಡೆದಿದ್ದರು. ನೋವು ತಾಳಲಾರದೇ ಚನ್ನಪ್ಪ ಅವರು ಬೊಬ್ಬೆ ಹಾಕಿದಾಗ ಅದೇ ಮಾರ್ಗವಾಗಿ ಬೈಕಿನಲ್ಲಿ ಹೋಗುತ್ತಿದ್ದ ಬಲರಾಮ ಗೌಳಿ ಹಾಗೂ ಪ್ರಕಾಶ ನಾಯ್ಕ ಎಂಬಾತರು ಅವರನ್ನು ರಕ್ಷಿಸಿದ್ದು, ನಂತರ ಮಂಜುನಾಥ ಹೆಗಡೆ ಎಂಬಾತರಿಗೆ ಫೋನ್ ಮಾಡಿದ ಚೆನ್ನಪ್ಪ ಅವರ ನೆರವಿನಿಂದ ಟಿಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಹಳೆ ಕಥೆ:
ಚೆನ್ನಪ್ಪ ಅವರ ಪುತ್ರ ನಿರಂಜನ್ ಪಾಟೀಲ 108 ವಾಹನದ ಚಾಲಕರಾಗಿದ್ದು, ಕೂಲಿ ಕೆಲಸ ಮಾಡುವ ಗಣೇಶ ವಡ್ಡರ ಹಾಗೂ ಹೊಸ್ಕೆರಿಯ ಕೃಷಿಕ ಉದಯ ದೇವಾಡಿಗ ಅವರ ಬಳಿ ಸಾಲ ಮಾಡಿದ್ದರು. ಈ ಸಾಲ ತೀರಿಸುವುದಕ್ಕಾಗಿ ತಂದೆ ಮಾಡಿದ ಅತಿಕ್ರಮಣ ಜಮೀನು ಪಾಲು ಮಾಡಿಕೊಡುವಂತೆ ಕಾಡಿಸುತ್ತಿದ್ದರು. ಆದರೆ, ಚೆನ್ನಪ್ಪ ಇದಕ್ಕೆ ಒಪ್ಪಿರಲಿಲ್ಲ. ಆಗ ಗಣೇಶ ವಡ್ಡರ್ ಹಾಗೂ ಉದಯ ನಾಯ್ಕ ಸಹ `ಜಮೀನು ಯಾವಾಗ ಮಗನಿಗೆ ಕೊಡುತ್ತೀರಿ?\’ ಎಂದು ಪ್ರಶ್ನಿಸಿದ್ದರು. ಆಗ ಚೆನ್ನಪ್ಪ `ನಮ್ಮ ಮನೆ ವಿಷಯಕ್ಕೆ ನೀವು ತಲೆ ಹಾಕಬೇಡಿ\’ ಎಂದು ಬುದ್ದಿ ಹೇಳಿದ್ದರು.
ಹೀಗಿರುವಾಗ ಗಣೇಶ ವಡ್ಡರ್ ಹಾಗೂ ಉದಯ ದೇವಾಡಿಗ ಸೇರಿ ಚೆನ್ನಪ್ಪ ಅವರ ತೋಟಕ್ಕೆ ನುಗ್ಗಿ ಅಲ್ಲಿದ್ದ ಅಡಿಕೆ ಹಾಗೂ ತೆಂಗಿನ ಫಸಲು ಪಡೆದು ಪರಾರಿಯಾಗಿದ್ದರು. ಈ ಬಗ್ಗೆ ಚೆನ್ನಪ್ಪ ಅವರು ಪುತ್ರ ನಿರಂಜನನಿಗೆ ಹೇಳಿದಾಗ `ಎಣ್ಣೆ ಕುಡಿಯಲು ದುಡ್ಡು ಕಡಿಮೆ ಆಗಿತ್ತು. ಅದಕ್ಕೆ ನಾನೇ ತೋಟದ ಫಸಲು ತರಲು ಹೇಳಿದ್ದೆ\’ ಎಂದಿದ್ದನು. ಇದಾದ ನಂತರ ವಾಚ್ಮೇನ್ ಚೆನ್ನಪ್ಪ ಅವರ ಅಪಹರಣ ಹಾಗೂ ಹಲ್ಲೆ ನಡೆದಿದ್ದು, ಹಲ್ಲೆ ನಂತರವೂ ಮನೆಗೆ ಬಂದ ಗಣೇಶ ವಡ್ಡರ್ ಹಾಗೂ ಉದಯ ದೇವಾಡಿಗ `2 ಲಕ್ಷ ರೂ ಹಣ ಕೊಡದೇ ಇದ್ದರೆ ಬೆಂಕಿ ಹಾಕಿ ಇಡೀ ಕುಟುಂಬದವರನ್ನು ಕೊಲ್ಲುವೆ\’ ಎಂದು ಬೆದರಿಸಿದ ಬಗ್ಗೆ ಚೆನ್ನಪ್ಪ ದೂರು ನೀಡಿದ್ದರು.
ಶಿರಸಿ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದ ಕಾರಣ ದೂರು ದಾಖಲಿಸಿಕೊಂಡಿದ್ದ ಯಲ್ಲಾಪುರ ನ್ಯಾಯಾಲಯದ ದೂರು ಶಿರಸಿ ಪೊಲೀಸರಿಗೆ ತನಿಖೆಗಾಗಿ ಈ ಪ್ರಕರಣವನ್ನು ವರ್ಗಾಯಿಸಿದೆ.