ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಕಲಿತ ಚಂದ್ರಶೇಖರ್ ಎಸ್ ಸಿ ಅವರು ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರಭಾಷೆ ಹಿಂದಿ ವಿಷಯವಾಗಿ ಅವರಿಗಿರುವ ಜ್ಞಾನ ಹಾಗೂ ಅರಿವು ಮೂಡಿಸುತ್ತಿರುವ ಹಿನ್ನಲೆ ಅವರಿಗೆ `ಹಿಂದಿ ಶಿಕ್ಷಕ ರತ್ನ\’ ಪ್ರಶಸ್ತಿ ದೊರೆತಿದೆ. ಹಿಂದಿ ವ್ಯಾಕರಣದ ಬಗ್ಗೆ ಅಪಾರ ಹಿಡಿತವಿರುವ ಚಂದ್ರಶೇಖರ್ ಎಸ್ ಸಿ ಅವರು ತಮ್ಮ ಬಾಲ್ಯದಲ್ಲಿಯೇ ಆ ವಿಷಯದ ಬಗ್ಗೆ ಪುಸ್ತಕ ಬರೆದು ಮೆಚ್ಚುಗೆಗಳಿಸಿದ್ದರು.
ಮೈಸೂರು ಮೂಲದವರಾದ ಚಂದ್ರಶೇಖರ್ ಎಸ್ ಸಿ ಅವರು ತಮ್ಮ ಪಾಲಕರ ಜೊತೆ ಬಾಲ್ಯದಲ್ಲಿಯೇ ಯಲ್ಲಾಪುರಕ್ಕೆ ಆಗಮಿಸಿದ್ದರು. ಶಿಕ್ಷಣ ಪೂರ್ಣಗೊಳಿಸಿದ ನಂತರ 1991ರಿಂದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸೇವೆ ಶುರು ಮಾಡಿದರು. ಇದರೊಂದಿಗೆ ಜಿಲ್ಲೆಯ ಹಲವು ಭಾಗಗಳಿಗೆ ಸಂಚರಿಸಿ ಹಿಂದಿ ವಿಷಯವಾಗಿ ಮಾತನಾಡಿದರು. ಭಾಷಾ ವಿಷಯಗಳ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿದರು. ಹಿಂದಿ ಪ್ರಚಾರ ಸಮಿತಿಯ ಪರೀಕ್ಷೆಗಳ ಸಂಘಟಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಮಕ್ಕಳ ಮನಸ್ಸು ಗೆದ್ದು ಅವರು ಅತ್ಯಂತ ಪರಿಣಾಮಕಾರಿಯಾಗಿ ಪಾಠ ಮಾಡುವ ಕಾರಣ ಹಿಂದಿ ವಿಷಯದಲ್ಲಿ ಈವರೆಗೂ ಶೇ 100 ಸಾಧನೆ ಸಾಧ್ಯವಾಗಿದೆ. 31 ವರ್ಷಗಳ ಕಾಲ ಹಿಂದಿ ವಿಷಯದಲ್ಲಿ ಯಾರೂ ಹಿಂದೆ ಬೀಳದಂತೆ ನೋಡಿಕೊಂಡ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಶಿಕ್ಷಣ ಇಲಾಖೆಯ ಮಹತ್ವದ ಕಾರ್ಯಗಳಲ್ಲಿ ಅವರು ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಸಂಘಟಕ, ಹಿಂದಿ ಭಾಷಾ ಸಂಘದ ಅಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಜಿಲ್ಲಾ ಮಟ್ಟದ ಡಯಟ್ ಹಾಗೂ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾಗಿ ಹಿಂದಿ ವಿಷಯದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ಕೌಟ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಟುವಟಿಕೆಗಳ ಬಗ್ಗೆಯೂ ಅರಿವು ಮೂಡಿಸಿದ್ದಾರೆ. ಮಕ್ಕಳಿಗೆ ರಾಜ್ಯ ಹಾಗೂ ರಾಷ್ಟçಮಟ್ಟದ ಪುರಸ್ಕಾರ ದೊರೆಯುವಲ್ಲಿಯೂ ಅವರ ಪಾತ್ರ ದೊಡ್ಡದು.
`ವಿಶ್ವಮಟ್ಟದ ಅನೇಕ ಜಾಂಬೂರಿಗಳಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಚಂದ್ರಶೇಖರ್ ಎಸ್ ಸಿ ಮುಖ್ಯ ಕಾರಣ. ತಾನಿರುವ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲರಾಗಿರುವ ಅವರು ಸಾಹಿತ್ಯ, ಸಂಘಟನೆಯಲ್ಲಿ ಸಹ ಸಾಧನೆ ಮಾಡಿದ್ದಾರೆ. ನಾಟಕ ನಿರ್ದೇಶನ, ಚರ್ಚಾ ಸ್ಪರ್ಧೆ ಸೇರಿ ಹಲವು ವಿಷಯಗಳಲ್ಲಿ ಅವರ ಕೈಚಳಕ ಕೆಲಸ ಮಾಡಿದೆ\’.
– ಎಂ ರಾಜಶೇಖರ, ವಿಜ್ಞಾನ ಶಿಕ್ಷಕರು