ಶಿರೂರು ಮಣ್ಣು ಕುಸಿತ ದುರಂತದಲ್ಲಿ ಸಾವನಪ್ಪಿದವರ ಕುಟುಂಬಕ್ಕೆ ಕೋಟಿ ರೂ ಪರಿಹಾರ ಒದಗಿಸಬೇಕು ಎಂದು ಹೋರಾಟ ನಡೆಸಿದ 8 ಜನರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅನುಮತಿ ಪಡೆಯದೇ ಹೋರಾಟ ನಡೆಸಿರುವುದೇ ಇದಕ್ಕೆ ಮುಖ್ಯ ಕಾರಣ. `ಪೊಲೀಸರ ಈ ವರ್ತನೆ ವಿರುದ್ಧ ಜನಾಂದೋಲನ ನಡೆಯಬೇಕು\’ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ಅಲೆದಾಟ ನಡೆಸುತ್ತಿರುವವರಲ್ಲಿ ಒಬ್ಬರಾದ ನಾಗೇಶ ನಾಯ್ಕ ಕಗಾಲ ಸುದ್ದಿಗಾರರಲ್ಲಿ ಹೇಳಿದರು.
ಊಹಾಪೋಹಗಳ ಸುದ್ದಿ!
`ಶಿರೂರು ಗುಡ್ಡ ಕುಸಿತಕ್ಕೆ ಐಆರ್ಬಿ ಕಂಪನಿ ಕಾರಣ. ಈ ಕಂಪನಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಆಪ್ತರ ಒಡೆತನದ್ದು ಎಂಬ ಮಾಹಿತಿಯಿದೆ. ಶಿರೂರು ದುರಂತ ಕಾರ್ಯಚರಣೆಗೆ 15 ಕೋಟಿ ರೂ ವೆಚ್ಚ ಮಾಡಿರುವ ಬಗ್ಗೆಯೂ ಹೇಳಲಾಗಿದ್ದು, ಇದ್ಯಾವುದು ಖಚಿತವಾಗಿಲ್ಲ. ಆದರೆ, ಆ ಹಣದ ಪೈಕಿ ಅಲ್ಪವನ್ನಾದರೂ ಸಂತ್ರಸ್ತರಿಗೆ ಕೊಡಬಹುದಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಹೊನ್ನಾವರದಲ್ಲಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ನಡೆಸುವ ಬಗ್ಗೆ ಪೊಲೀಸ್ ಅನುಮತಿಗೆ ಪತ್ರ ನೀಡಿದ್ದರೂ ಹಿಂಬರಹ ಬಂದಿರಲಿಲ್ಲ. ಅದಾಗಿಯೂ ಪ್ರಕರಣ ದಾಖಲಿಸಿದ್ದಾರೆ\’ ಎಂದು ದೂರಿದರು. `ತನ್ನ ವಿರುದ್ಧ ದಾಖಲಾದ ಪ್ರಕರಣದ ಪ್ರತಿ ಈವರೆಗೂ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ\’ ಎಂದು ಸ್ಪಷ್ಠಪಡಿಸಿದರು.
ಭದ್ರತೆ ಒದಗಿಸಿದವರಿಂದಲೇ ದೂರು!
ಸೆ 12ರಂದು ಜನಪರ ಒಕ್ಕೂಟದವರು ಸೇರಿ ವಿವಿಧ ಸಂಘಟನೆಯವರು ಹೊನ್ನಾವರದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸುವ ವೇಳೆ ಪೊಲೀಸರು ಭದ್ರತೆ ಒದಗಿಸಿದ್ದರು. ಆ ವೇಳೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಬಗ್ಗೆ ಅವರೇ ತಿಳಿಸಿದ್ದು, ಸಂಚರಿಸುವ ವಾಹನಗಳಿಗೆ ತೊಂದರೆ ಆಗದಂತೆಯೂ ನೋಡಿಕೊಂಡಿದ್ದರು. ಆದರೆ, ಇದೀಗ ತಮ್ಮ ಶಾಂತಿಯುತ ಪ್ರತಿಭಟನೆ ನಡೆಸಿದರೂ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಜನಪರ ಒಕ್ಕೂಟ ಇದನ್ನು ಖಂಡಿಸುತ್ತದೆ\’ ಎಂದು ನಾಗೇಶ ನಾಯ್ಕ ಕಗಾಲ ಹೇಳಿದರು.
ಪ್ರಮುಖರಾದ ನರಸಿಂಹ ನಾಯ್ಕ, ರಾಘವೇಂದ್ರ ನಾಯ್ಕ, ಬೆನಿತ್ ಸಿದ್ದಿ, ಅಮಿತ್ ನಾಯ್ಕ, ಜಾನ್ ಸಿದ್ದಿ ಅವರ ಹೇಳಿಕೆಯನ್ನು ಬೆಂಬಲಿಸಿದರು.