ಅಕ್ರಮ ಮರಳು ಅಡ್ಡೆ ನಡೆಸುವವರಿಗೆ ಪೊಲೀಸ್, ಅರಣ್ಯ, ಕಂದಾಯ ಸೇರಿ ಹಲವು ಇಲಾಖೆಯವರಿಗೆ ಮಾಮೂಲಿ ಸಲ್ಲಿಕೆಯಾಗುತ್ತದೆ ಎಂಬ ಆರೋಪವಿತ್ತು. ಇದೀಗ ಆ ಆರೋಪವನ್ನು ಯಾರೂ ಮಾಡುವ ಹಾಗಿಲ್ಲ. ಕಾರಣ ಅಕ್ರಮ ಮರಳುಗಾರಿಕೆ ನಡೆಸಲು ಆಯಾ ಸ್ಥಳಗಳಿಗೆ ಮರಳು ತುಂಬುವ ವಾಹನಗಳೇ ಹೋಗುತ್ತಿಲ್ಲ!
ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳನ್ನು ಗುರುತಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆ ಸ್ಥಳಗಳಿಗೆ ತೆರಳುವ ರಸ್ತೆ ಮಾರ್ಗವಾಗಿ ಕಾಲುವೆ ನಿರ್ಮಿಸುತ್ತಿದ್ದಾರೆ. ಆ ಕಾಲುವೆ ದಾಟಿ ಮರಳು ಲಾರಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಅಕ್ರಮ ಅಡ್ಡೆಗಳೆಲ್ಲವೂ ಸ್ಥಗಿತವಾಗಿದೆ. ಇಷ್ಟು ವರ್ಷಗಳ ಕಾಲ ಅಕ್ರಮ ಮರಳುಗಾರಿಕೆ ತಡೆಯಲು ಗಣಿ ಮತ್ತು ಭೂ ವಿಜ್ಞಾನ ಸೇರಿ ಹಲವು ಇಲಾಖೆಯವರು ಕಸರತ್ತು ನಡೆಸಿದರೂ ಈ ಸುಲಭ ಮಾರ್ಗವನ್ನು ಯಾರೂ ಅನುಸರಿಸಿರಲಿಲ್ಲ!
ಮಟ್ಕಾ, ಇಸ್ಪಿಟ್ ಸೇರಿ ಜೂಜಾಟ ಆಡುವವರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಪೊಲೀಸರು ಕಳೆದ ಮೂರು ದಿನಗಳಿಂದ ಅಕ್ರಮ ಮರಳು ಅಡ್ಡೆಗಳ ಮೇಲೆ ನಿಗಾವಹಿಸಿದ್ದಾರೆ. ಪರಿಸರ ನಾಶದ ಜೊತೆ ರಸ್ತೆಗಳನ್ನು ಹಾಳು ಮಾಡುತ್ತಿರುವ ಮರಳು ಮಾಫಿಯಾದ ವಿರುದ್ಧ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಗಾಲದ ಅವಧಿಯಲ್ಲಿ ಸಹ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಮರಳುಗಾರಿಕೆ ನಡೆಯುತ್ತಿದ್ದು, ಈ ಎಲ್ಲಾ ಅಕ್ರಮಗಳಿಗೆ ಕೊಂಚ ಕಡಿವಾಣ ಬಿದ್ದಿದೆ.
ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಗಾಳಿ, ಹಣಕೋಣ ಮಾರ್ಗದಲ್ಲಿ ಅಕ್ರಮ ಮರಳುಗಾರಿಕೆ ಜೋರಾಗಿತ್ತು. ಇದನ್ನು ಅರಿತ ಎಂ ನಾರಾಯಣ ಅವರು ಅಲ್ಲಿನ ಕಾಡು ರಸ್ತೆಗೆ ಅಡ್ಡಲಾಗಿ ಟ್ರೆಂಚ್ ನಿರ್ಮಿಸಿದ್ದಾರೆ. ಹೊನ್ನಾವರದ ಉಪ್ಪೊಣಿ, ನಗರ ಬಸ್ತಿಕೇರಿ, ಮೇಲಿನ ಮೂಡ್ಕಣಿ, ಕೆಳಗಿನ ಮೂಡ್ಕಣಿ, ಗೇರುಸೊಪ್ಪದಲ್ಲಿ ಸಹ ಅಕ್ರಮ ಮರಳುಗಾರಿಕೆ ಸಾಧ್ಯತೆ ಹಿನ್ನಲೆ ಅಲ್ಲಿ ಸಹ ಕಾಲುವೆ ನಿರ್ಮಾಣ ಕೆಲಸ ನಡೆದಿದೆ. ಕಳಸಿನ ಮೀಟೆಯಲ್ಲಿ ಅಕ್ರಮ ಮರಳುಗಾರಿಕೆಗೆಗೂ ತಡೆ ಒಡ್ಡಲಾಗಿದೆ.
ಕುಮಟಾ ತಾಲೂಕಿನ ದಿವಿಗಿ, ಮಿರ್ಜಾನ್, ಕೋಡ್ಕಣಿ ಹೆಗಡೆ ಹಾಗೂ ಮಾಸೂರಿನಲ್ಲಿ ಮರಳುಗಾರಿಕೆ ನಡೆಸುವವರ ಮೇಲೆ ನಿಗಾ ಇರಿಸಲಾಗಿದ್ದು, ಆ ಭಾಗದಲ್ಲಿಯೂ ಮರಳುಗಾರಿಕೆ ಪ್ರದೇಶದಲ್ಲಿ ಟ್ರೆಂಚ್ ನಿರ್ಮಾಣ ಕಾರ್ಯ ನಡೆದಿದೆ. ಹೊನ್ನಾವರದ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹ ಕಟ್ಟೆಚ್ಚರವಹಿಸಲಾಗಿದೆ. ಈ ಎಲ್ಲಾ ಹಿನ್ನಲೆ ಅಕ್ರಮ ಮರಳುಗಾರಿಕೆ ನಡೆಸುವವರು ತಲೆಬಿಸಿಯಲ್ಲಿದ್ದಾರೆ.