ಯಲ್ಲಾಪುರ: `ಪಟ್ಟಣದ ವಾರ್ಡ ನಂ 15 ಜಡ್ಡಿಯ ಮತದಾರರನ್ನು ವಾರ್ಡ ನಂ 17ರ ರವೀಂದ್ರ ನಗರದ ಮತಗಟ್ಟೆಗೆ ವರ್ಗಾಯಿಸಲಾಗಿದ್ದು, ಇದರಿಂದ ಅನುದಾನ ಹಾಗೂ ಅಭಿವೃದ್ಧಿಗೆ ತೊಂದರೆಯಾಗಿದೆ. ಈ ಲೋಪವನ್ನು ಸರಿಪಡಿಸಬೇಕು\’ ಎಂದು ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಚುನಾವಣಾ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.
`ಜಡ್ಡಿಯಲ್ಲಿರುವ ಮತಗಟ್ಟೆಯಿಂದ ರವೀಂದ್ರ ನಗರದ ಮತಗಟ್ಟೆಗೆ ಸುಮಾರು 2ಕಿಮೀ ದೂರವಿದ್ದು, ಮತದಾರರಿಗೆ ಸಹ ಮತದಾನಕ್ಕೆ ಬರಲು ಸಮಸ್ಯೆ ಆಗುತ್ತಿದೆ. ಸಮೀಪದ ಮತಗಟ್ಟೆ ಬಿಟ್ಟು ಬೇರೆ ಮತಗಟ್ಟೆಗೆ ಅವರ ಹಕ್ಕು ವರ್ಗಾಯಿಸಿದ್ದರಿಂದ ಮತದಾನದ ಪ್ರಮಾಣವೂ ಕಡಿಮೆಯಾಗಿದೆ. 60 ಮತದಾರರು ಈ ಸಮಸ್ಯೆ ಅನುಭವಿಸುತ್ತಿದ್ದಾರೆ\’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ. ಸೋಮವಾರ ತಹಶೀಲ್ದಾರ್ ಕಚೇರಿ ಮೂಲಕ ಅವರು ಈ ಪತ್ರ ರವಾನಿಸಿದರು.
`ಇಲ್ಲಿನ ಮತದಾರರನ್ನು ಅಲ್ಲಿ ಹಾಗೂ ಅಲ್ಲಿನ ಮತದಾರರನ್ನು ಇನ್ನೊಂದು ಕಡೆ ಹಂಚಿಕೆ ಮಾಡಿದ್ದರಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ನಮಗೆ ಮತ ನೀಡಿದ ಜನ ಅವರವರ ಕ್ಷೇತ್ರದಲ್ಲಿ ಅಭಿವೃದ್ಧಿ ಬಯಸುತ್ತಿದ್ದು, ಬೇರೆ ವಾರ್ಡಿಗೆ ತೆರಳಿ ಕೆಲಸ ಮಾಡಲು ಜನಪ್ರತಿನಿಧಿಗಳಿಗೆ ಸಾಧ್ಯವಿಲ್ಲ. ರವೀಂದ್ರ ನಗರ-ಜಡ್ಡಿ ಮಾತ್ರವಲ್ಲದೇ ಬೇರೆ ಬೇರೆ ವಾರ್ಡುಗಳಲ್ಲಿ ಸಹ ಈ ಸಮಸ್ಯೆಯಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಈ ಸಮಸ್ಯೆ ಸರಿಪಡಿಸಬೇಕು. ಆ ಮೂಲಕ ವಾಸಸ್ಥಳದ ವಾರ್ಡಿನಲ್ಲಿಯೇ ಮತದಾರರು ಹಕ್ಕು ಚಲಾಯಿಸುವ ಹಾಗೇ ಮಾಡಬೇಕು\’ ಎಂದು ಅವರು ಒತ್ತಾಯಿಸಿದ್ದಾರೆ.