ಕುಮಟಾ: `ಇಲ್ಲಿನ ತಹಶೀಲ್ದಾರ್ ಕಚೇರಿ ಅವ್ಯವಸ್ಥೆಯ ಆಗರವಾಗಿದ್ದು ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾಯಿಸಬೇಕು\’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ರಿಸ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು `ಕಳೆದ 15 ವರ್ಷಗಳಿಂದ ತಹಶೀಲ್ದಾರ್ ಕಚೇರಿಯಲ್ಲಿ ಬೀಡು ಬಿಟ್ಟಿರುವ ನೌಕರರಿದ್ದಾರೆ. ಅವರು ಜನ ಸಾಮಾನ್ಯರ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದು, ಅವರ ವಿರುದ್ಧ ಕ್ರಮವಾಗಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಮಾಹಿತಿ ಕೇಳಿ ಕಂದಾಯ ಸಚಿವರಿಗೆ ದಾಖಲೆ ಜೊತೆ ದೂರು ನೀಡಲಿದೆ\’ ಎಂದು ತಿಳಿಸಿದರು.
`ಹಿರಿಯ ನಾಗರಿಕರು, ಅಂಗವಿಕಲರು ಸೇರಿ ಜನ ಸಾಮಾನ್ಯರು ಸಹ ಸರ್ಕಾರಿ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಜನ ನೀಡುವ ದಾಖಲೆಗಳ ನಾಪತ್ತೆ, ಪ್ರಮುಖ ದಾಖಲೆಗಳ ಕಣ್ಮರೆ ಸಾಮಾನ್ಯವಾಗಿದ್ದು ಇದರಿಂದ ಜನರ ಹಣ ಹಾಗೂ ಸಮಯ ಹಾಳಾಗುತ್ತಿದೆ\’ ಎಂದವರು ಆಕ್ರೋಶ ವ್ಯಕ್ತಪಡಿಸಿದರು. `ಆಡಳಿತ ವಿಭಾಗದಿಂದ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಅಸಾಧ್ಯ. ಹೀಗಾಗಿ ಹೋರಾಟ ಅನಿವಾರ್ಯ\’ ಎಂದವರು ತಿಳಿಸಿದರು.