ಕುಮಟಾ: ಕೆಎಸ್ಆರ್ಟಿಸಿಯಲ್ಲಿ 32 ವರ್ಷಗಳ ಕಾಲ ಅಪಘಾತರಹಿತವಾಗಿ ಬಸ್ಸು ಚಾಲನೆ ಮಾಡಿದ್ದ ಶೇಷಗಿರಿ ಕೂಸ ಗೌಡ ಅವರನ್ನು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಚೇರಿಯಲ್ಲಿ ಗೌರವಿಸಿದರು.
2012ರಲ್ಲಿ ಸೇವೆಯಿಂದ ನಿವೃತ್ತರಾಗಿರುವ ಶೇಷಗಿರಿ ಗೌಡ ಅವರಿಗೆ ಇದೀಗ 71 ವರ್ಷ. ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಅವರು ಒಂದೇ ಒಂದು ಸಣ್ಣ ಅಪಘಾತವನ್ನು ಮಾಡದೇ ಅತ್ಯಂತ ಜಾಗರುಕತೆಯಿಂದ ಬಸ್ಸು ಚಲಾಯಿಸಿದ್ದರು. ಈ ಸೇವೆಯನ್ನು ಗುರುತಿಸಿ ನಿಗಮವೂ ಅವರಿಗೆ ಚಿನ್ನ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಿದೆ. ಕಾರವಾರ, ಕುಮಟಾ ಮಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಧರ್ಮಸ್ಥಳ, ಬೆಳಗಾವಿ ಮೊದಲಾದ ಕಡೆ ಅವರು ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಷಗಿರಿ ಗೌಡ `ನೌಕರ ನಿವೃತ್ತಿ ಹೊಂದಿದ ನಂತರ ಅಂಥವರನ್ನು ಗುರುತಿಸುವವರು ಕಡಿಮೆ. ಆದರೆ, ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ನಿವೃತ್ತಿ ಹೊಂದಿ 12 ವರ್ಷಗಳ ನಂತರವೂ ನನ್ನನ್ನು ಮರೆಯದೇ ಗೌರವಿಸಿದೆ\’ ಎಂದು ಸಂತಸ ಹಂಚಿಕೊoಡರು. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಮಾತನಾಡಿ `ನೊಂದವರಿಗೆ ನೆರವು ನೀಡಲು ನಮ್ಮ ಸಂಘಟನೆ ಸದಾ ಬದ್ಧ. ಇದರೊಂದಿಗೆ ಸಾಧಕರಿಗೆ ಸನ್ಮಾನವೂ ನಮ್ಮ ಹೊಣೆಗಾರಿಕೆ\’ ಎಂದರು.
ಪ್ರಮುಖರಾದ ಸುಧಾಕರ ನಾಯ್ಕ, ವಿಠಲ ನಾಯ್ಕ, ಬಾಳ ನಾಯ್ಕ, ಮುನ್ನ ಸಾಬ್, ಪಾಂಡು ನಾಯ್ಕ, ಕೃಷ್ಣ ಶೆಟ್ಟಿ, ಸ್ಟೀಪನ್ ನರೋನ ಹಾಗೂ ಪ್ರಕಾಶ ಪಟಗಾರ ಸನ್ಮಾನಿತರಿಗೆ ಶುಭ ಕೋರಿದರು.