ಯಲ್ಲಾಪುರ: ಬಿಸಗೋಡು ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ದೊರೆಯದ ಕಾರಣ ಊರಿನ ಪ್ರಮುಖರು ನಿರ್ಣಯಿಸಿದಂತೆ ಜೋಳಿಗೆ ಹಿಡಿದು ಮನೆ ಮನೆ ಸಂಚರಿಸುತ್ತಿದ್ದು, ರಸ್ತೆ ಅಭಿವೃದ್ಧಿಗೆ ಊರಿನ ಜನ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡುತ್ತಿದ್ದಾರೆ.
ಮೊದಲ ದಿನ ಸಂಗ್ರಹಿಸಿದ ಹಣದಲ್ಲಿ ರಸ್ತೆ ಹೊಂಡಗಳನ್ನು ಮುಚ್ಚಲಾಗಿದೆ. ಜೊತೆಗೆ ರಸ್ತೆ ಅಂಚಿಗೆ ಮಣ್ಣು ಹಾಕಿ ಬಸ್ಸು ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರಸ್ತೆ ಹೊಂಡದ ಕಾರಣ ಬಸ್ಸು ಓಡಾಟಕ್ಕೆ ಕಷ್ಟವಾಗಿದ್ದು, ಬಸ್ಸು ಚಾಲಕರು ಊರಿಗೆ ಬರಲು ಒಪ್ಪುತ್ತಿರಲಿಲ್ಲ. ಇದರಿಂದ ಆ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಈ ಹಿನ್ನಲೆ ಮೊದಲ ಹಂತವಾಗಿ ಬಸ್ಸು ಓಡಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಯಿತು.
ಇದನ್ನೂ ಓದಿ: ಹೊಗಳುಭಟ್ಟರಿಗೆ ಸಿಕ್ಕಿಲ್ಲ ಹೊಂಡ ಮುಚ್ಚುವ ಅನುದಾನ: ರಸ್ತೆ ಅಭಿವೃದ್ಧಿಗೆ ಭಿಕ್ಷೆ ಬೇಡುವ ಅಭಿಯಾನ
ಮೊದಲ ದಿನ 32850ರೂ ರೂ ಸಂಗ್ರಹವಾಗಿದ್ದು, 7 ತಾಸುಗಳ ಕಾಲ ಜೆಸಿಬಿ ಬಳಸಿ ಕೆಲಸ ನಿರ್ವಹಿಸಲಾಯಿತು. ಅಗತ್ಯವಿರುವ ಕಡೆ ಕಡಿ ಮಿಶ್ರಿತ ಮಣ್ಣು ಹಾಕಿ ರಸ್ತೆ ಸಮದಟ್ಟು ಮಾಡಲಾಯಿತು. ಬೇರೆ ಬೇರೆ ಊರುಗಳಲ್ಲಿ ಉದ್ಯೋಗದಲ್ಲಿರುವ ಬಿಸಗೋಡು ಹಾಗೂ ಸುತ್ತಮುತ್ತಲಿನ ಜನ ಸಹ ಆನ್ಲೈನ್ ಮೂಲಕ ದೇಣಿಗೆ ನೀಡುತ್ತಿದ್ದಾರೆ. ನವರಾತ್ರಿ ಹಬ್ಬ ಮುಗಿದ ನಂತರ ರಸ್ತೆಗೆ ಮೋರಂ ಮಣ್ಣು ಹಾಕಲು ಉದ್ದೇಶಿಸಲಾಗಿದೆ.