ಯಲ್ಲಾಪುರ: ಜೀವ ವೈವಿಧ್ಯಗಳ ಪಟ್ಟಿಗೆ ಸೇರಲು ಎಲ್ಲಾ ಅರ್ಹತೆಗಳನ್ನು ಹೊಂದಿದ ಅಂದಾಜು 200 ವರ್ಷದ ಹಳೆಯ ಮರ ನಾಶವಾಗಿದೆ.
ಯಲ್ಲಾಪುರ ಭಾಗದಲ್ಲಿ `ಜೀವ ವೈವಿಧ್ಯ ಉಳಿಸಿ\’ ಎಂಬ ಜನ ಜಾಗೃತಿಗಾಗಿ ಲಕ್ಷ ಲೆಕ್ಕದಲ್ಲಿ ಹಣ ವೆಚ್ಚ ಮಾಡಿ ಕಾರ್ಯಾಗಾರ ನಡೆಸಿದರೂ ಅಪರೂಪದ ಮರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರಸ್ತೆ ಅಂಚಿನಲ್ಲಿದ್ದ ಭಾರೀ ಗಾತ್ರದ ಮರ ಕಟಾವು ನಡೆದು ಆರು ದಿನ ಕಳೆದರೂ ಈವರೆಗೆ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಆರೋಪಿತರ ಜಾಡು ಹಿಡಿದಿಲ್ಲ. ಹೀಗಾಗಿ ಅರಣ್ಯ ಇಲಾಖೆಯ ಈ ನಡೆಯೂ ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.
ದೆಹಳ್ಳಿ ಹಾಗೂ ಆನಗೋಡು ಗ್ರಾಮ ಪಂಚಾಯತ ನಡುವಿನ ಕಾಳಿ ಕಣಿವೆ ಪ್ರದೇಶವನ್ನು ಜೀವ ವೈವಿಧ್ಯ ತಾಣ ಎಂದು ಗುರುತಿಸಲಾಗಿದೆ. ಇಲ್ಲಿರುವ ಮರ ಅರಶಿಣ ಬಳ್ಳಿಗಳ ಬಗ್ಗೆ ಅಧ್ಯಯನ ನಡೆಸಿದ್ದು, ಅದು ಅಪರೂಪದಲ್ಲಿಯೇ ಅಪರೂಪ ಎಂದು ಹೇಳಲಾಗಿದೆ. ಜೀವ ವೈವಿಧ್ಯ ತಾಣ, ಅಪರೂಪದ ಸಸ್ಯಗಳ ಬೀಡು ಎಂದು ಗುರುತಿಸಲಾದ ಪ್ರದೇಶದಲ್ಲಿರುವ ಮರವೇ ಇದೀಗ ನಾಶವಾಗಿದೆ. ದೆಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಿಸಗೋಡು ರಸ್ತೆ ಚಿಕ್ಯಾನಮನೆ ತೆರಳುವ ರಸ್ತೆ ಅಂಚಿನಲ್ಲಿದ್ದ ಮರ ಕಡಿತವಾಗಿದೆ. ಸಾರ್ವಜನಿಕರು ನಿತ್ಯ ಓಡಾಡುವ ರಸ್ತೆ ಅಂಚಿನಲ್ಲಿಯೇ ಈ ಮರ ಇದ್ದು, ಅದು ನೆಲಕ್ಕೆ ಉರುಳಿದರೂ ಅರಣ್ಯ ಸಿಬ್ಬಂದಿ ಮೌನವಾಗಿದ್ದಾರೆ.
`ಎಷ್ಟು ವರ್ಷದ ಮರ ಎಂದು ಲೆಕ್ಕ ಮಾಡಿಲ್ಲ. ಮರ ಕಟಾವು ಆದ ಬಗ್ಗೆ ಯಾರು ಮಾಹಿತಿ ನೀಡಿರಲಿಲ್ಲ. ಎರಡು ದಿನದ ಹಿಂದೆ ಸ್ಥಳ ಪರಿಶೀಲನೆ ಮಾಡಿದ್ದು, ಆರೋಪಿಗಳ ಹುಡುಕಾಟ ನಡೆದಿದೆ\’ ಎಂದು ಅಲ್ಲಿನ ಪಾರೆಸ್ಟರ್ ಶಿವಾನಂದ ಹೇಳಿದರು. `ಆ ಮಾರ್ಗದಲ್ಲಿ ಹಾದು ಹೋದ ಅಪಾಯಕಾರಿ ವಿದ್ಯುತ್ ತಂತಿ ಕಳಚಿ ಅದಾದ ನಂತರ ಮರ ಕಟಾವು ಮಾಡಲಾಗಿದೆ. ಮರ ಕಟಾವು ನಂತರ ಮತ್ತೆ ವಿದ್ಯುತ್ ತಂತಿಯನ್ನು ಕಂಬಗಳಿಗೆ ಜೋಡಿಸಲಾಗಿದೆ. ಇಷ್ಟೆಲ್ಲ ಕೆಲಸ ನಡೆದರೂ ಅರಣ್ಯ ಇಲಾಖೆಯವರಿಗೆ ಮಾಹಿತಿ ಇರಲಿಲ್ಲವೇ? ಎಂಬುದು ಎಲ್ಲರ ಪ್ರಶ್ನೆ. ಕಡಿತವಾದ ಮರ ಇನ್ನೊಂದು ಮರಕ್ಕೆ ಸಿಕ್ಕಿಬಿದ್ದು ಸಾಗಾಟಕ್ಕೆ ಸಮಸ್ಯೆಯಾದ ಪರಿಣಾಮ ಮರ ಕಟಾವು ವಿಷಯ ಹೊರಬಿದ್ದಿದೆ. ಇಲ್ಲವಾದಲ್ಲಿ ಅಲ್ಲಿ ಮರವೇ ಇರಲಿಲ್ಲ ಎಂದು ಹೇಳಿದರೂ ಎಲ್ಲರೂ ನಂಬಬೇಕಿತ್ತು ಎಂಬುದು ಹಲವರ ಮಾತು.