ಅಂಕೋಲಾ: ಮಠಾಕೇರಿಯ ಆರ್ಯದುರ್ಗಾ ದೇವಸ್ಥಾನದ ಬಳಿ ವಾಸವಾಗಿರುವ ನಾಗರಾಜ ಪಕೀರಪ್ಪ ಕಡತಾಳ ಎಂಬಾತರು ಆನ್ಲೈನ್ ಶಾಂಪಿoಗ್ ಮಾಡಲು ಹೋಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಂಡಿದ್ದಾರೆ.
ಸೆ 15ರಂದು ಅವರು ಮಿಶೋ ಆಪ್ ಮೂಲಕ 129ರೂಪಾಯಿಯ ಮೊಬೈಲ್ ಕವರ್ ಆರ್ಡರ್ ಮಾಡಿದ್ದರು. ಆದರೆ, ಮೊಬೈಲ್ ಕವರ್ ಬಗ್ಗೆ ಅಲ್ಲಿ ಯಾವುದೇ ಮಾಹಿತಿ ಇಲ್ಲದ ಕಾರಣ ಮೀಶೋ ಕಸ್ಟಮರ್ ಕೇರ್\’ಗೆ ಫೋನ್ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ನೆಟ್ ಮೂಲಕ ಮೀಶೋ ಹೆಲ್ಪಲೈನ್ ನಂ ಹುಡುಕಾಡಿದ್ದು, ಅಲ್ಲಿ ಸಿಕ್ಕ ನಂಬರಿಗೆ ಫೋನಾಯಿಸಿದ್ದರು.
ಆಗ ಮಾತನಾಡಿದ ವ್ಯಕ್ತಿ `ಹಣ ಮರಳಿಸುವೆ\’ ಎಂದು ಭರವಸೆ ನೀಡಿ, ವಿಡಿಯೋ ಕಾಲ್ ಮೂಲಕ ನಾಗರಾಜ ಕಡತಾಳ ಅವರ ಫೋನ್ ಫೇ ಖಾತೆಯನ್ನು ತೆರೆಯಿಸಿದ್ದಾರೆ. ಅಲ್ಲಿ ಆತ ಪಿನ್ ಹಾಕುವಂತೆ ತಿಳಿಸಿದ್ದರಿಂದ ನಾಗರಾಜ್ ಅವರ ಮಾತು ನಂಬಿ ಪಿನ್ ಹಾಕಿದ್ದಾರೆ. ಆಗ ಖಾತೆಯಲ್ಲಿದ್ದ 63894ರೂ ನಾಪತ್ತೆಯಾಗಿದೆ. ಅಸಲಿಗೆ ಮೀಶೋ ಹೆಲ್ಪಲೈನ್ ನಂ ಬಿಟ್ಟು ನಾಗರಾಜ್ ನಕಲಿ ಹೆಲ್ಪಲೈನ್ ಸಂಖ್ಯೆಗೆ ಫೋನ್ ಮಾಡಿ ಹಣ ಕಳೆದುಕೊಂಡಿದ್ದಾರೆ.