ಯಲ್ಲಾಪುರ: ಕಾಡು ಪ್ರಾಣಿ ಹತ್ಯೆ ಮಾಡಿ ಹೂತಿಟ್ಟ ಅನುಮಾನದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದಿಂದ ಆನಗೋಡಿನ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಕಾಡುಪ್ರಾಣಿ ಕಳೆಬರ ಸಿಕ್ಕಿಲ್ಲ. ಅಲ್ಲಲ್ಲಿ ತಡಕಾಡಿದ ಅರಣ್ಯ ಸಿಬ್ಬಂದಿಗೆ ಮಹತ್ವದ ಸಂಗತಿ ಹೊರಬಂದಿದ್ದು, ಆ ರಹಸ್ಯವನ್ನು ಅವರು ಯಾರಿಗೂ ಹೇಳುತ್ತಿಲ್ಲ. ಮೊದಲು ಉತ್ಸಾಹದಿಂದ ಪ್ರಕರಣ ಬೆನ್ನಟ್ಟಿದ ಅರಣ್ಯ ಸಿಬ್ಬಂದಿ ನಂತರ `ಪ್ರಭಾವಿಗಳ ಉಸಾಬರಿ ನಮಗೇಕೆ?\’ ಎಂದು ಮೌನವಾಗಿರುವ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.
`ತನಗೆ ಆಗದವರು ಕಾಡು ಪ್ರಾಣಿ ಹತ್ಯೆ ಮಾಡಿ ತನ್ನ ಮನೆ ಅಂಚಿನಲ್ಲಿ ಹೂತಿರುವ ಅನುಮಾನವಿದೆ\’ ಎಂದು ಸಾವಗದ್ದೆಯ ಭಾಸ್ಕರ ಭಟ್ಟ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಮೊದಲೇ ಕಾಡುಪ್ರಾಣಿ ಹತ್ಯೆ ಪ್ರಕರಣದ ವಿಷಯವಾಗಿ ಓಡಾಡುತ್ತಿದ್ದ ಅರಣ್ಯ ನೌಕರರು ಮಂಗಳವಾರ ಸಾವಗದ್ದೆಗೂ ತೆರಳಿ ಶೋಧ ನಡೆಸಿದರು. ಹೊಸದಾಗಿ ಮಣ್ಣು ಕಂಡುಬoದ ಕಡೆ ಸಾಕಷ್ಟು ಪ್ರಮಾಣದಲ್ಲಿ ಅಗೆದರೂ ಕಾಡು ಪ್ರಾಣಿಯ ಕಳೆಬರಹ ಸಿಗಲಿಲ್ಲ. `ಇಲ್ಲಿ ಏನೂ ನಡೆದಿಲ್ಲ\’ ಎಂದು ಭಾಸ್ಕರ ಭಟ್ಟರಿಂದ ಮುಚ್ಚಳಿಕೆ ಪಡೆದ ಅರಣ್ಯಾಧಿಕಾರಿಗಳು ಅಲ್ಲಿಂದ ತೆರಳಿದರು. ಈ ವೇಳೆ ಬೇರೆ ಕಡೆ ಶೋಧ ನಡೆಸಿದ್ದು, ಅಲ್ಲಿ ಮಹತ್ವದ ವಿಷಯವೊಂದು ಹೊರ ಬಂದಿರುವ ಮಾಹಿತಿಯಿದೆ. ಆದರೆ, ಗಂಭೀರ ವಿಷಯವಾಗಿದ್ದರೂ ಅದನ್ನು ಸ್ಥಳೀಯವಾಗಿಯೇ ರಾಜಿ ಮಾಡಿಕೊಂಡಿರುವ ಬಗ್ಗೆ ಗುಸು ಗುಸು ಕೇಳಿಬಂದಿದೆ.
ಸಣ್ಣಪುಟ್ಟ ವಿಷಯಗಳಿಗೂ ತೊಂದರೆ ನೀಡುವ ಆ ಭಾಗದ ಅರಣ್ಯ ಸಿಬ್ಬಂದಿ ದೊಡ್ಡವರ ವಿಷಯ ಬಂದಾಗ ರಾಜಿಸೂತ್ರಕ್ಕೆ ಮಣಿಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪ್ರಸ್ತುತ ಕಾಡುಪ್ರಾಣಿ ಹತ್ಯೆ ವಿಷಯವಾಗಿಯೂ ಪ್ರಭಾವಿಯೊಬ್ಬರ ಕೈವಾಡದ ಹಿನ್ನಲೆ ಅರಣ್ಯಾಧಿಕಾರಿಗಳು ರಾಜಿಸೂತ್ರದ ಮೊರೆ ಹೋದ ಬಗ್ಗೆ ಊಹಾಪೋಹಗಳು ದಟ್ಟವಾಗಿದೆ. ಆನಗೋಡು-ಬಿಸಗೋಡು ಭಾಗದ ಉಪವಲಯ ಅರಣ್ಯಾಧಿಕಾರಿ ವಿರುದ್ಧ ಆ ಭಾಗದ ಜನ ಮೊದಲೇ ಸಿಡಿದೆದ್ದು, ಅವರ ವರ್ಗಾವಣೆಗಾಗಿ ಒತ್ತಾಯಿಸಿದ್ದಾರೆ. ಈ ನಡುವೆ `ನನ್ನ ತಂಟೆಗೆ ನೀ ಬರಬೇಡ. ನಿನ್ನ ತಂಟೆಗೆ ನಾ ಬರುವುದಿಲ್ಲ\’ ಎಂದು ಪ್ರಭಾವಿಯೊಬ್ಬರ ರಾಜಿಸೂತ್ರದ ಹಿನ್ನಲೆ ಪ್ರಕರಣವನ್ನು ಕೈ ಬಿಡುತ್ತಿರುವ ಅನುಮಾನ ವ್ಯಕ್ತವಾಗಿದೆ.
ಸಾವಗದ್ದೆಯಲ್ಲಿ ಅರಣ್ಯ ಸಿಬ್ಬಂದಿ ಕಾಡುಪ್ರಾಣಿ ಕಳೆಬರೆ ಹುಡುಕಾಡುತ್ತಿದ್ದಾಗ ಅಲ್ಲಿದ್ದ ಭಾಸ್ಕರ ಭಟ್ಟ ಸಾವಗದ್ದೆ ಅವರಿಗೆ ಜೀವ ಬೆದರಿಕೆ ಬಂದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಸಹ ಎರಡು ಕಡೆಯವರಿಗೆ ಬುದ್ದಿ ಹೇಳಿ ಪ್ರಕರಣ ತಿಳಿಗೊಳಿಸಿದ್ದಾರೆ. ಅರಣ್ಯ ಇಲಾಖೆ ವಾಹನಕ್ಕೆ ಅಡ್ಡಲಾಗಿ ತಮ್ಮ ವಾಹನ ನಿಲ್ಲಿಸಿದ ಆರೋಪಿತರು ಅಧಿಕಾರಿಗಳ ಮುಂದೆಯೇ ದಬ್ಬಾಳಿಕೆ ನಡೆಸಿರುವ ಬಗ್ಗೆ ಭಾಸ್ಕರ ಭಟ್ಟ ದೂರಿದ್ದು, ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಈ ಗಲಾಟೆಯಿಂದ ತಮ್ಮ ಕರ್ತವ್ಯಕ್ಕೆ ಅಡ್ಡಿಯಾದ ಬಗ್ಗೆಯೂ ಅವರು ದೂರು ದಾಖಲಿಸಿಲ್ಲ.
ಹೀಗಾಗಿ ಅಂದು ಅಲ್ಲಿ ನಡೆದ ಎಲ್ಲಾ ವಿದ್ಯಮಾನಗಳು ಅನುಮಾನಗಳಿಂದಲೇ ಕೂಡಿದ್ದು, ಈ ಬಗ್ಗೆ ಮಾಹಿತಿ ಕೋರಿ ಮೂರು ಬಾರಿ ವಲಯ ಅರಣ್ಯಾಧಿಕಾರಿ ನರೇಶ ಅವರನ್ನು ಸಂಪರ್ಕಿಸಲಾಯಿತು. `ಮತ್ತೆ ಫೋನ್ ಮಾಡುವೆ\’ ಎಂದು ಹೇಳಿದ ಅವರು ತಾಸು ಕಳೆದರೂ ಪ್ರತಿಕ್ರಿಯಿಸಲಿಲ್ಲ.