ಕುಮಟಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದ್ದು, ಅವರ ಬೇಡಿಕೆ ಈಡೇರಿಸುವ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉಪವಿಭಾಗಾಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ಮನವಿ ರವಾನಿಸಿದ ಕೇಂದ್ರದವರು `ಎಲ್ಲಾ ಯೋಜನೆಗಳ ಸೂಕ್ತ ಅನುಷ್ಠಾನಕ್ಕೆ ಗ್ರಾಮ ಆಡಳಿತಾಧಿಕಾರಿಗಳು ಅತಿ ಮುಖ್ಯ. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಅವರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮುಖ್ಯ ಬೇಡಿಕೆಗಳನ್ನು ಈಡೇರಿಸಬೇಕು\’ ಎಂದು ಆಗ್ರಹಿಸಿದರು.
`ಅನೇಕ ಗ್ರಾಮ ಆಡಳಿತಾಧಿಕಾರಿಗಳಿಗೆ ಕುಳಿತುಕೊಳ್ಳಲು ಖುರ್ಚಿ ಇಲ್ಲ. ಕಚೇರಿ ಇದ್ದರೂ ಅಲ್ಲಿನ ವ್ಯವಸ್ಥೆಗಳು ಸರಿಯಾಗಿಲ್ಲ. ಮೇಲಧಿಕಾರಿಗಳ ಕಿರುಕುಳ, ಕೆಲಸದ ಒತ್ತಡದ ನಡುವೆಯೂ ಅವರು ಕರ್ತವ್ಯದಲ್ಲಿದ್ದಾರೆ. ಅವರ ಕೆಲಸಕ್ಕೆ ಅನುಗುಣವಾಗಿ ಸಿಮ್, ಲಾಪ್‌ಟಾಪ್ ಪೂರೈಸುವುದು ಸರ್ಕಾರದ ಕರ್ತವ್ಯ\’ ಎಂದವರು ಮನವರಿಕೆ ಮಾಡಿದರು.
`ಕೆಳ ಹಂತದ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ ತಪ್ಪಿಸಬೇಕು. ಅವರಿಗೆ ಸಹ ಭದ್ರತೆ ಒದಗಿಸಬೇಕು. ಅವರ ನ್ಯಾಯಯುತವಾದ ಎಲ್ಲಾ ಬೇಡಿಕೆ ಈಡೇರಿಸಬೇಕು\’ ಎಂದು ಆಗ್ರಹಿಸಿದರು. `ತಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಅಂಚೆ ಚಳುವಳಿ ಮೂಲಕ ಹೋರಾಟ ನಡೆಸುವೆ\’ ಎಂದು ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗ್ಸ್ ಎಚ್ಚರಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಲಕ್ಷ್ಮೀಕಾಂತ ಗೌಡ, ರಾಮ ಶಶಿಧರ್ ಇತರರು ಇದ್ದರು.