ಕುಮಟಾ: ಗೋಕರ್ಣದ ಗೊನೆಹಳ್ಳಿಯ ಮಳಲಿಯ `ನಾಯಕ\’ರು ಪ್ರೀತಿಯಿಂದ ಮುದೋಳ ನಾಯಿಯನ್ನು ಸಾಕಿದ್ದರು. ಅವರ ಮನೆ-ತೋಟದ ರಕ್ಷಣೆಗಾಗಿ ಶ್ರಮಿಸುತ್ತಿದ್ದ ಆ ನಾಯಿ ಕಳೆದ ಮೂರು ದಿನಗಳಿಂದ ಕಾಣುತ್ತಿಲ್ಲ.
ಮಗುವಿನ ಹಾಗೇ ಸಾಕಿದ್ದ ನಾಯಿ ಕಾಣೆಯಾಗಿದ್ದರಿಂದ ಆ ನಾಯಕರು ದಿಕ್ಕೆಟ್ಟಿದ್ದರು. ಅವರಿವರ ಮನೆಗಳಿಗೆ ತೆರಳಿ ನಾಯಿ ಬಗ್ಗೆ ವಿಚಾರಿಸಿದ್ದರು. ನಾಯಿ ಕಾಣದ ಬಗ್ಗೆ ಅವರಿವರಲ್ಲಿ ಹೇಳಿಕೊಂಡಿದ್ದರು. ಆದರೂ ನಾಯಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ನಾಯಿ ಹುಡುಕಾಟಕ್ಕೆ ಸಾಕಷ್ಟು ಕಡೆ ಹುಡುಕಾಟ ನಡೆಸಿದ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡುವುದು ಮಾತ್ರ ಬಾಕಿ!
`ಆ ನಾಯಿಯನ್ನು ನಾನು ನೋಡಿದ್ದೇನೆ. ಅದು ಹೀಗಾಯಿತು\’ ಎಂದು ಅಲ್ಲಿನ ಗೌಡರೊಬ್ಬರು ನಾಯಕರಿಗೆ ಮಾಹಿತಿ ನೀಡಿದ್ದು, ಅದೇ ಮಾಹಿತಿ ಆಧರಿಸಿ ನಾಯಿ ಕಳೆದುಕೊಂಡ ನಾಯಕರು ಮತ್ತೊಬ್ಬ `ನಾಯಕ\’ರ ವಿರುದ್ಧ ಪೊಲೀಸ್ ಠಾಣೆಗೆ ದೂರಿದರು. ಕಾಡುಹಂದಿ ಹಿಡಿಯಲು ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿಗೆ ತಗುಲಿ ನಾಯಿ ಸಾವನಪ್ಪಿರುವುದು ಆ ದೂರಿನ ಮುಖ್ಯ ಸಾರಾಂಶ.
ಪೊಲೀಸರು ಸಹ ದೂರು ಆಧರಿಸಿ ನಾಯಿಯ ಹುಡುಕಾಟ ನಡೆಸಿದರು. ಆದರೆ, ನಾಯಿ ಕೊಂದ ನಾಯಕ ಅದನ್ನು ರಹಸ್ಯವಾಗಿ ಮಣ್ಣು ಮಾಡಿದ ಕಾರಣ ನಾಯಿಯ ಶವ ಸಿಕ್ಕಿಲ್ಲ. ಎಲ್ಲಿ ಹೂತಿದ್ದೇನೆ ಎಂದು ಸಹ ಆತ ಎಷ್ಟು ಬಾರಿ ಪ್ರಶ್ನಿಸಿದರೂ ಬಾಯಿ ಬಿಟ್ಟಿಲ್ಲ. ಎಲ್ಲರಿಗೂ ಆ ನಾಯಕ ಕೆಲಸದ ಬಗ್ಗೆ ಗೊತ್ತಿದ್ದರೂ ಆತನೇ ನಾಯಿ ಕೊಂದ ಬಗ್ಗೆ ಯಾವುದೇ ಆಧಾರವಿಲ್ಲ. ಅರಣ್ಯ ಕಾನೂನು ಉಲ್ಲಂಘಿಸಿ ಕಾಡುಹಂದಿ ಹತ್ಯೆಗೆ ಅಕ್ರಮ ವಿದ್ಯುತ್ ತಂತಿ ಎಳೆದ ಬಗ್ಗೆಯೂ ದಾಖಲೆ ಸಿಕ್ಕಿಲ್ಲ.
ನಾಯಿ ಶವ ಸಿಕ್ಕಿದ್ದರೆ ಮಾತ್ರ ಪ್ರಕರಣ ದಾಖಲಿಸಬಹುದು ಎಂದು ಪೊಲೀಸರು ದೂರುದಾರರಿಗೆ ಹೇಳಿದರು. ಶವ ಸಿಕ್ಕರೆ ಮರಣೋತ್ತರ ಪರೀಕ್ಷೆ ಮೂಲಕ ಅಕ್ರಮ ವಿದ್ಯುತ್ ಎಳೆದಿರುವಿಕೆ ಹಾಗೂ ಕಾಡುಪ್ರಾಣಿ ಹತ್ಯೆಯ ಎರಡು ಪ್ರಕರಣಗಳು ಕಳ್ಳ ನಾಯಕನ ಮೇಲೆ ಬರುತ್ತಿದ್ದವು. ಇದರೊಂದಿಗೆ ನಾಯಿ ಕಳೆದುಕೊಂಡವರ ಮೂರನೇ ದೂರು ಸಹ ಆತನ ವಿರುದ್ಧ ದಾಖಲಾಗುತ್ತಿತ್ತು. ಸಾಕ್ಷಿ ಸಿಗದ ಕಾರಣ ಕೊನೆಗೆ ರಾಜಿಸೂತ್ರದ ಮೂಲಕ ಈ ಪ್ರಕರಣ ಬಗೆಹರಿಯಿತು. ಆದರೆ, ನಾಯಿ ಕಳೆದುಕೊಂಡ ನೋವು ನಾಯಕರಿಂದ ದೂರವಾಗಿಲ್ಲ.