ಕಾರವಾರ: `ನಗರಸಭೆ ಅಧಿಕಾರಿಗಳ ಪಾಲಿಗೆ ಗುತ್ತಿಗೆದಾರರು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಾಗಿದ್ದಾರೆ. ಹೀಗಾಗಿ 10 ಸಾವಿರ ರೂಪಾಯಿಗೆ ಮುಗಿಯುವ ಕೆಲಸಕ್ಕೂ ನಗರಸಭೆ 90 ಸಾವಿರ ರೂ ಹಣ ಪಾವತಿ ಮಾಡುತ್ತಿದೆ\’ ಎಂದು ನಗರಸಭೆ ಸದಸ್ಯ ಸಂದೀಪ ತಳೇಕರ್ ದೂರಿದ್ದಾರೆ.
ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು `ಕನ್ನಡ ರಾಜ್ಯೋತ್ಸವ, ಅಗಸ್ಟ 15ರಂದು ಸಾರ್ವಜನಿಕರಿಗೆ ನೀಡುವ ಚಹ ತಿಂಡಿಗೆ ಸಹ ದುಪ್ಪಟ್ಟು ದರದಲ್ಲಿ ಹಣ ಪಾವತಿ ನಡೆದಿದೆ. ನೀರು ಪೂರೈಕೆ ವಿಷಯದಲ್ಲಿಯೂ ಅವ್ಯವಹಾರ ನಡೆದಿದೆ. ಬಿಣಗಾ ಸೇರಿದಂತೆ ವಿವಿಧ ಕಡೆಗಳಲ್ಲಿ ಪೈಲ್ ಅಡಳಡಿಕೆ, ಚಿಕ್ಕಪುಟ್ಟ ದುರಸ್ತಿ ಕಾಮಗಾರಿಗೆ 9 ಲಕ್ಷ ರೂ. ಬಿಲ್ ಮಾಡಲಾಗಿದೆ. ಕಳೆದ 10 ತಿಂಗಳಿನಿAದ ಎಲ್ಲಾ ಕಾಮಗಾರಿಗಳು ಶಕುಂತಲಾ ಕನ್ಸಟ್ರಕ್ಷನ್ ಎಂಬಾತರಿಗೆ ಮಾತ್ರ ಸಿಗುತ್ತಿದೆ\’ ಎಂದು ವಿವರಿಸಿದರು.
`30ಕ್ಕೂ ಅಧಿಕ ಟೆಂಡರ್ ಒಬ್ಬರಿಗೆ ನೀಡಲಾಗಿದೆ. ಬೇರೆ ಯಾರೂ ಗುತ್ತಿಗೆ ಪಡೆಯಲು ಬಂದಿಲ್ಲವೇ?\’ ಎಂದವರು ಪ್ರಶ್ನಿಸಿದರು. `ವಾರ್ಡವೊಂದರ ಬಾವಿ ಸ್ವಚ್ಚತೆ ಹೆಸರಿನಲ್ಲಿ 75 ಸಾವಿರ ಹಣ ಪಾವತಿಯಾಗಿದೆ. ಬಾವಿಯಿಂದ 40 ಲೋಡ್ ಮಣ್ಣು ತೆಗೆದಿರುವುದಾಗಿ ಹೇಳಿದ್ದು, ಅಷ್ಟೊಂದು ಮಣ್ಣು ಬಾವಿಯಲ್ಲಿ ಬರಲು ಸಾಧ್ಯವೇ?\’ ಎಂದು ಪ್ರಶ್ನಿಸಿದರು. `ಪಿಳ್ಳೆವಾಡಾದ ಮೂರು ಬಾವಿಗೆ ಚಿಕ್ಕಪುಟ್ಟ ಕೆಲಸ ಮಾಡಿ ತಲಾ 98 ಸಾವಿರ ರೂ ಬಿಲ್ ಮಾಡಲಾಗಿದೆ. ಈ ಎಲ್ಲಾ ಅಕ್ರಮದ ಬಗ್ಗೆ ತನಿಖೆ ಅಗತ್ಯ\’ ಎಂದು ಒತ್ತಾಯಿಸಿದರು.
ಸದಸ್ಯ ಹರೀಶ್ ಸಾಗೇಕರ ಮಾತನಾಡಿ `ನಂದನಗದ್ದಾದ ವಾರ್ಡಿನಲ್ಲಿ ಕಾಮಗಾರಿ ಮಾಡಲಾಗಿದೆ ಎಂದು 2.18 ಲಕ್ಷ ರೂ ಬಿಲ್ ಮಾಡಲಾಗಿದೆ. ಕಾಮಗಾರಿ ನಡೆದ ಬಗ್ಗೆ ಮಾಹಿತಿಯಿಲ್ಲ\’ ಎಂದರು. ಅಧಿಕಾರಿಗಳನ್ನು ಸದಸ್ಯ ಮಕ್ಬುಲ್ ಶೇಖ್ ತರಾಟೆಗೆ ತೆಗೆದುಕೊಂಡರು. ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್ `ನಡೆದಿರುವ ಕಾಮಗಾರಿ, ಬಿಲ್ ಪಾವತಿ ಮಾಡಿದ ಬಗ್ಗೆ ಕಮಿಟಿ ರಚನೆ ಮಾಡಿ ಪರಿಶೀಲನೆ ಮಾಡಲಾಗುವುದು\’ ಎಂದು ಸಭೆಗೆ ತಿಳಿಸಿದರು.