ಕಾರವಾರ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಿನ್ನರ ಮೂಲದ ಪವಿತ್ರ ನಾಯ್ಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಮಾನ ಮನಸ್ಕರೆಲ್ಲ ಸೇರಿ ಕಾರವಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಿದ್ದಾರೆ.
ಪವಿತ್ರ ನಾಯ್ಕ ಅವರ ಪತಿ ಒಂದು ವರ್ಷದ ಹಿಂದೆ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದರು. ಕುಟುಂಬದವರಿದ್ದರೂ ಸಹ ಕಾಳಜಿ ತೆಗೆದುಕೊಳ್ಳದ ಕಾರಣ ಮಾನಸಿಕ ಅಸ್ವಸ್ಥತೆಯಿಂದ ನಗರದಲ್ಲಿ ಸುತ್ತಾಡುತ್ತಿದ್ದ ಪವಿತ್ರ ಅವರಿಗೆ ಎಲ್ಲಿಯಾದರೂ ಆರೈಕೆ ಕೊಡಿಸುವಂತೆ ಸೆ 11ರಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರಿಗೆ ಕರೆ ಬಂದಿತ್ತು. ಅದರಂತೆ ಪವಿತ್ರ ಅವರು ಅಲೆದಾಡುತ್ತಿದ್ದ ಬಾಂಡಿಶಿಟ್ಟಾಕ್ಕೆ ತಕ್ಷಣವೇ ಪೊಲೀಸರೊಂದಿಗೆ ತೆರಳಿ ಅವರನ್ನು ಮಾಧವ ನಾಯಕ ಸ್ವೀಕಾರ ಕೇಂದ್ರಕ್ಕೆ ಕರೆದೊಯ್ದು ದಾಖಲಿಸಿದ್ದರು.
ಸ್ವೀಕಾರ ಕೇಂದ್ರದಲ್ಲಿ ಗರ್ಭಿಣಿಯರು ಸೇರಿದಂತೆ ಇನ್ನಿತರ ಮಹಿಳೆಯರು ಇದ್ದಿದ್ದರಿಂದ ಹಾಗೂ ಪವಿತ್ರ ಅವರು ಅಲ್ಲಿ ಗಲಾಟೆ ಮಾಡಿ ಗಾಜುಗಳನ್ನೆಲ್ಲ ಒಡೆದಿದ್ದರಿಂದ ಅವರನ್ನು ನ್ಯಾಯಾಲಯದ ಸೂಚನೆಯ ಮೇರೆಗೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಅವರಿಗೆ ಥೈರಾಯ್ಡ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯೂ ಇದ್ದ ಕಾರಣ ಡಿಮ್ಹಾನ್ಸ್ನವರು ಕಿಮ್ಸ್\’ಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ.ಅವರ ಅಂತ್ಯಕ್ರಿಯೆ ನಡೆಸಲು ಮಹಿಳಾ ಸ್ವೀಕಾರ ಕೇಂದ್ರಕ್ಕೆ ನ್ಯಾಯಾಲಯ ಸೂಚಿಸಿದೆ. ಕಿನ್ನರದಲ್ಲಿರುವ ಅವರ ಕುಟುಂಬದವರು ಅಸಡ್ಡೆ ತೋರಿದ ಹಿನ್ನಲೆ ಸಮಾನ ಮನಸ್ಕರೆಲ್ಲರೂ ಸೇರಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದಾರೆ.