ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕಾಣೆಯಾಗಿದ್ದ ರಾಮಾ ಜಾನು ನಾಯ್ಕ ಎಂಬಾತ ಬೆಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದು, ಆತ ಬದುಕಿರುವ ಸುದ್ದಿ ಕೇಳಿ ಸಂಬoಧಿಕರಿಗೆ ಸಮಾಧಾನವಾಗಿದೆ.
ಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಲಕ್ಷ್ಮಣ ನಾಯ್ಕ ಅವರ ಸಂಬoಧಿಯಾದ ಈತ ಮನೆಯಲ್ಲಿ ಜಗಳ ಮಾಡಿಕೊಂಡು ಹೋಗಿದ್ದ. ಮನೆಯಿಂದ ಹೊರ ಹೋದ ನಂತರ ಆತನನ್ನು ನೋಡಿದವರಿರಲಿಲ್ಲ. ಜೂ 16ರಂದು ನಡೆದ ಶಿರೂರು ಗುಡ್ಡ ಕುಸಿತದಲ್ಲಿ ಆತನೂ ಕಣ್ಮರೆಯಾದ ಬಗ್ಗೆ ಅಂದಾಜಿಸಲಾಗಿತ್ತು. ಆದರೆ, ಆತ ಹೋಟೆಲ್ ಬಳಿ ಬಂದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಕಣ್ಮರೆಯಾದ ಮೂವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಹುಡುಕಾಟ ನಡೆದಿತ್ತು.
ಜೂ 29ರಂದು ರಾಮಾ ನಾಯ್ಕ ಕಣ್ಮರೆಯಾದ ಬಗ್ಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಗನನ್ನು ಹುಡುಕಿಕೊಡಿ ಎಂದು ಆತನ ತಾಯಿ ಶೈಲಜಾ ಪೊಲೀಸರಿಗೆ ದುಂಬಾಲು ಬಿದ್ದಿದ್ದರು. ನಾಪತ್ತೆಯಾದ ರಾಮಾ ನಾಯ್ಕ ಸಾವನಪ್ಪಿದ ಲಕ್ಷ್ಮಣ ನಾಯ್ಕ ಅವರ ಸಂಬAಧಿಯಾದ ಕಾರಣ ಆತ ಹೋಟೆಲ್ ಅಡಿಗೆ ನೆಲಸಮವಾದ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಎಷ್ಟು ಹುಡುಕಿದರೂ ಆತ ಸಿಕ್ಕಿರಲಿಲ್ಲ. ಎರಡು ತಿಂಗಳ ಬಳಿಗೆ ರಾಮಾ ನಾಯ್ಕ ಬೆಂಗಳೂರಿನ ಮಾಗಡಿ ರಸ್ತೆಯ ಕೋಟಿಗೆಪಾಳ್ಯ ನಿರಾಶ್ರಿತ ಕೇಂದ್ರದಲ್ಲಿರುವುದು ಗೊತ್ತಾಗಿದೆ. ಪೊಲೀಸರು ತಾಯಿ ಮಡಿಲಿಗೆ ಮಗನನ್ನು ಒಪ್ಪಿಸಿದ್ದಾರೆ.
ತಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ರಾಮಾ ನಾಯ್ಕ ಮುನಿಸಿಕೊಂಡಿದ್ದ. ಇದೇ ಕಾರಣಕ್ಕೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ.