ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ ಪಂ ಪ್ರತಿನಿಧಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಸರ್ಕಾರಿ ಕಚೇರಿ ಕೆಲಸ ಸಾಗುತ್ತಿಲ್ಲ. ಬಹುತೇಕ ಸರ್ಕಾರಿ ನೌಕರರು ವೇತನಸಹಿತ ಪ್ರತಿಭಟನೆಗೆ ಹಾಜರಾಗಿದ್ದರಿಂದ ಅವರಿಗೆ ಬರುವ ಸಂಬಳದಲ್ಲಿ ಕಡಿತವಾಗುತ್ತಿಲ್ಲ. ಆದರೆ, ಜನ ಸಾಮಾನ್ಯರು ಮಾತ್ರ ಸರ್ಕಾರಿ ಕೆಲಸಕ್ಕಾಗಿ ನಿತ್ಯ ಕಚೇರಿ ಅಲೆದಾಡುತ್ತಿದ್ದಾರೆ.
ಕಚೇರಿ ಅವಧಿಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಅವಕಾಶವಿದ್ದರೂ ಕಚೇರಿ ಕಾರ್ಯಬಿಟ್ಟು ಅಧಿಕಾರಿಗಳು ಧರಣಿಗೆ ತೆರಳಿರುವುದನ್ನು ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ವಿರೋಧಿಸಿದ್ದಾರೆ. `ಗ್ರಾ ಪಂ ನೌಕರರು ಪ್ರತಿಭಟನೆಗೆ ಹೋಗಿದ್ದರಿಂದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವವರಿಲ್ಲ. ಪ್ರಮಾಣ ಪತ್ರಗಳನ್ನು ಪಡೆಯಲಾಗುತ್ತಿಲ್ಲ. ಕಸ ವಿಲೇವಾರಿ ಸಮಸ್ಯೆ ಸಹ ಬಗೆಹರಿದಿಲ್ಲ\’ ಎಂದವರು ದೂರಿದ್ದಾರೆ. `ಸಾರ್ವಜನಿಕ ಸೇವೆಯಲ್ಲಿರುವ ಕಚೇರಿಗೆ ಬೀಗ ಹಾಕಿ ಪ್ರತಿಭಟನೆಗೆ ತೆರಳುವುದು ಸರಿಯಲ್ಲ. ನೌಕರರು ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸಬೇಕು\’ ಎಂದವರು ಒತ್ತಾಯಿಸಿದ್ದಾರೆ.

`ಸರ್ಕಾರ ಸಹ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬಾರದು ಎಂದು ನೌಕರರಿಗೆ ಸೂಚಿಸಬೇಕು. ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು\’ ಎಂದು ಆಗ್ರಹಿಸಿದ್ದಾರೆ. `ಕೆಲ ದಿನಗಳ ಹಿಂದೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ ನಡೆಸಿದ್ದರು. ಸರ್ಕಾರದಿಂದ ಸೂಕ್ತ ಭರವಸೆ ಬಂದ ನಂತರ ಅವರು ಕೆಲಸಕ್ಕೆ ಹಾಜರಾಗಿದ್ದು, ಸಾರ್ವಜನಿಕರ ಅನುಕೂಲವಾಗುವಂತೆ ಗ್ರಾ ಪಂ ಪ್ರತಿನಿಧಿ ಹಾಗೂ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು\’ ಎಂದವರು ಹೇಳಿದ್ದಾರೆ.