ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ 25ಕ್ಕೂ ಅಧಿಕ ಹುಲಿಗಳು ಇವೆ. ಹುಲಿ ಸಂರಕ್ಷಿತ ಪ್ರದೇಶ ಹೊರತುಪಡಿಸಿ ಪಶ್ಚಿಮಘಟ್ಟದ ವಿವಿಧ ಪ್ರದೇಶಗಳಲ್ಲಿ ಅವುಗಳ ಸಂಚಾರವಿದೆ. ಆದರೆ, ಈ ಪ್ರದೇಶದಲ್ಲಿ ಹುಲಿ ದಾಳಿಗಿಂತ ಕರಡಿ ಉಪಟಳವೇ ಹೆಚ್ಚಾಗಿದೆ!
ಕಳೆದ ಮೂರು ತಿಂಗಳ ಅವಧಿಯಲ್ಲಿ ಆರು ಜನರ ಮೇಲೆ ಕರಡಿ ದಾಳಿ ನಡೆಸಿದೆ. ಪ್ರತಿ ಬಾರಿಯೂ ಮಾರಣಾಂತಿಕ ಪ್ರಮಾಣದಲ್ಲಿ ಕರಡಿ ದಾಳಿ ನಡೆಸಿದ್ದು, ಆಕ್ರಮಣಕ್ಕೆ ಒಳಗಾದವರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಯಲ್ಲಾಪುರ, ಮುಂಡಗೋಡ, ದಾಂಡೇಲಿ ಭಾಗದಲ್ಲಿ ಪದೇ ಪದೆ ಕರಡಿ ದಾಳಿ ನಡೆಯುತ್ತಿದೆ. ಹೊಲದಲ್ಲಿ ಕೆಲಸ ಮಾಡಲು ಹೋದಾಗ, ಹೊಲಕ್ಕೆ ಬೇಲಿ ಹಾಕುವಾಗ, ಕಾಡಿನಲ್ಲಿ ದನ ಮೇಯಿಸಲು ಹೋದಾಗ ಹೀಗೆ ಕಾಡಂಚಿನ ಜನರ ನಿತ್ಯದ ಜೀವನ ಕೆಲಸದ ನಡುವೆ ಕರಡಿಗಳ ದಾಳಿ ನಡೆದಿವೆ. ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ಕರಡಿಗಳ ಭೀತಿ ಹೆಚ್ಚಾಗಿದೆ. ಕರಡಿ ದಾಳಿಗೆ ಸಿಲುಕಿದವರೆಲ್ಲರೂ ದಿನವೂ ದುಡಿದು ಬದುಕುವ ಬಡ ರೈತರು. ಅದರಲ್ಲಿಯೂ ಈ ಆರೂ ದಾಳಿಯಲ್ಲಿ ನೊಂದವರು ಹಿಂದೂಳಿದ ಗೌಳಿ ಸಮುದಾಯದವರೇ ಆಗಿದ್ದಾರೆ.
ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ ಭಾಗದಿಂದ ಭೀಮಗಡ ಅಭಯಾರಣ್ಯ ದಾಟಿ ಗೋವಾವರೆಗೆ ಕರಡಿಗಳ ಆವಾಸ ಇದೆ. ಆದರೆ, ಯಲ್ಲಾಪುರ, ಮುಂಡಗೋಡು ಹಾಗೂ ದಾಂಡೇಲಿಯಲ್ಲಿನ ಕರಡಿಗಳು ಮಾತ್ರ ಜನರಿಗೆ ಉಪಟಳ ನೀಡುತ್ತಿವೆ. ಕಾಡಂಚಿನ ಗ್ರಾಮಗಳ ಸಮೀಪ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ತಾಯಿ ಶವವೇ ಸಿಗಲಿಲ್ಲ!
`ಕೆಲ ವರ್ಷಗಳ ಹಿಂದೆ ಹೊಲಕ್ಕೆ ಹೋಗಿ ಬರುತ್ತಿದ್ದ ನಮ್ಮ ತಾಯಿಯನ್ನು ಕರಡಿ ಕೊಂದು ಹಾಕಿತು. ಶವ ಕೂಡ ಸಿಗಲಿಲ್ಲ. ಈಗ ತಮ್ಮನ ಮೇಲೆ ದಾಳಿ ಮಾಡಿ ತಲೆ ಕಚ್ಚಿದೆ. ಊರಿನಲ್ಲಿ ಕತ್ತಿ, ಕೊಡಲಿ ಹಿಡಿದು ಓಡಾಡುವ ಪರಿಸ್ಥಿತಿ ಬಂದಿದೆ\’ ಎಂದು ಮುಂಡಗೋಡದ ಹುಲ್ಲುಂಡ ಗ್ರಾಮದ ವಿಠ್ಠಲ ಕುಕ್ಕರೆ ಅವರು ಕರಡಿಗಳು ಸೃಷ್ಟಿಸಿದ ಭಯವನ್ನು ಬಿಚ್ಚಿಟ್ಟಿದ್ದಾರೆ. `ಹಿಂದಿನ ವರ್ಷ ಪಕ್ಕದ ಮರ್ಗುಡಿ ಊರಿನಲ್ಲಿ ಕರಡಿಯು ಒಬ್ಬನನ್ನು ಕಚ್ಚಿ ಸಾಯಿಸಿದೆ. ಹೊಲಕ್ಕೆ ಹೋದರೆ ಪ್ರತಿ ದಿನವೂ ಕರಡಿಗಳು ಕಾಣಿಸುತ್ತವೆ. ಅಷ್ಟರ ಮಟ್ಟಿಗೆ ಕರಡಿಗಳ ಹಾವಳಿ ಮಿತಿ ಮೀರಿದೆ. ಗಾಯಗೊಂಡು ಸರಕಾರಿ ಆಸ್ಪತ್ರೆಗೆ ಬಂದರೂ ಖರ್ಚು ಇದ್ದೇ ಇರುತ್ತದೆ. ನಮ್ಮಂಥ ಬಡವರು ಎಲ್ಲಿಂದ ದುಡ್ಡು ತರಲು ಸಾಧ್ಯ. ಅರಣ್ಯ ಇಲಾಖೆಯೂ ನೆರವು ನೀಡುತ್ತಿಲ್ಲ\’ ಎಂದು ವಿಠ್ಠಲ ಕುಕ್ಕರೆ ನೋವು ತೋಡಿಕೊಂಡರು.
ಇದನ್ನೂ ಓದಿ: ಕೊಕ್ಕರೆ ಕುಟುಂಬದ ಮೇಲೆ ಕರಡಿಗೆ ಸಿಟ್ಟು
ಇದನ್ನೂ ಓದಿ: ಮಹಿಳೆ ಮೇಲೆ ಕರಡಿ ದಾಳಿ
ಇದನ್ನೂ ಓದಿ: ಕರಡಿ ಮಾಡಿದ ಕಿತಾಪತಿ