ಶಿರಸಿ:
ಶಿರಸಿ ನಗರ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿಕೊಂಡು ನಿವಾಸಿಗಳನ್ನು ಆತಂಕಕ್ಕೀಡುಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಬನವಾಸಿ ರಸ್ತೆಯ ಪೆಡಂಬೈಲ್ ಸಮೀಪದ ತೋಟಗಾರಿಕಾ ಕಾಲೇಜು ಹಿಂಭಾಗದ ತವರುಮನೆ ತೋಟಕ್ಕೆ ಶನಿವಾರ ತಡರಾತ್ರಿ ಆನೆ ಹಿಂಡು ನುಗ್ಗಿದೆ.
ಆನೆಗಳ ಹಿಂಡು ಕಾಣಿಸಿಕೊಂಡ ಹಿನ್ನಲೆ ಡಿಎಫ್‌ಓ ಅಜ್ಜಯ್ಯ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ಆನೆಗಳು ನಗರದ ಸಮೀಪದಲ್ಲೇ ಕಾಣಿಸಿಕೊಂಡಿದ್ದು, ನಗರದೊಳಕ್ಕೆ ಪ್ರವೇಶಿಸುವ ಆತಂಕ ಎದುರಾಗಿತ್ತು. ಈ ಹಿನ್ನಲೆ ಆನೆಗಳನ್ನು ಬೇರೆಡೆಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ಆನೆಗಳ ಹಿಂಡನ್ನು ತೆರಕನಳ್ಳಿ ಮೂಲಕ ಉಂಚಳ್ಳಿ ಅರಣ್ಯದತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ವಾಹನಗಳು ಸಂಚರಿಸುವ ರಸ್ತೆಗೆ ಸಮೀಪದಲ್ಲಿದ್ದಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ವಾಹನಗಳ ಓಡಾಟವನ್ನು ನಿಷೇಧಿಸಲಾಗಿತ್ತು. ಬಳಿಕ ಆನೆಗಳ ಹಿಂಡನ್ನು ಅರಣ್ಯದತ್ತ ಓಡಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು.