
ದಾಂಡೇಲಿ :
ನಗರದ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯ ಅನುದಾನದಡಿ ಒಂದು ತಿಂಗಳ ಉಚಿತ ಆಟೋಮೋಟಿವ್ ರಿಪೇರ್ ಪೈಂಟರ್ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆಯನ್ನು ನೀಡಲಾಯಿತು.
ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ.ಆರ್ ಅವರು ಇಂದು ಶಿಕ್ಷಣದ ಜೊತೆ ಜೊತೆಗೆ ಕೌಶಲ್ಯವು ಅತಿ ಅವಶ್ಯ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಈ ಒಂದು ತಿಂಗಳ ತರಬೇತಿಯಲ್ಲಿ ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಈ ತರಬೇತಿಯ ಲಾಭವನ್ನು ಪಡೆದು ಜೀವನದಲ್ಲಿ ಉನ್ನತಿಯನ್ನು ಸಾಧಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಸಂದೇಶ್ ಎಸ್.ಜೈನ್ ಅವರು ಜೀವನದಲ್ಲಿ ನಿರ್ದಿಷ್ಟವಾದ ಗುರಿಯನ್ನಿಟ್ಟು ಆ ಗುರಿ ಸಾಧಿಸಲು ಪ್ರಯತ್ನಶೀಲರಾಗಬೇಕು. ಯುವಜನತೆಯ ಮುಖ್ಯವಾಗಿ ಆರ್ಥಿಕವಾಗಿ ಸ್ವಾವಲಂಬನೆಯ ಕಡೆಗೆ ದಿಟ್ಟ ಹೆಜ್ಜೆಯನ್ನು ಇಡಬೇಕು. ತಾನು ಬದುಕುವುದರ ಜೊತೆಗೆ ನಮ್ಮ ಬದುಕು ಇನ್ನೊಬ್ಬರಿಗೆ ಆಸರೆಯಾಗುವ ನಿಟ್ಟಿನಲ್ಲಿ ನಾವು ನಮ್ಮ ವ್ಯಕ್ತಿತ್ವ ಹಾಗೂ ನಮ್ಮ ಬದುಕನ್ನು ಮುನ್ನಡೆಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ಅಕ್ಷಯ ಗಿರಿ ಗೋಸಾವಿ ಅವರು ಶಿಬಿರಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಟಿಯು ಕೌಶಲ್ಯಾಭಿವೃದ್ಧಿ ಕೇಂದ್ರದ ಉಪ ನಿರ್ದೇಶಕರಾದ ವಿಜೇತ್ ಸ್ವಾದಿ ಅವರು ಯುವಜನತೆಗೆ ಹೊಸ ಬದುಕು ಕಟ್ಟಿಕೊಳ್ಳಲು ಇಲ್ಲಿಯ ತರಬೇತಿಗಳು ಪ್ರೇರಣದಾಯಿಯಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಅತಿ ಅವಶ್ಯಕ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸಂಸ್ಥೆಯ ತರಬೇತಿ ಕಾರ್ಯಕ್ರಮಕ್ಕೆ ವಿಶೇಷವಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ನಿರಂತರವಾಗಿ ಸ್ಪಂದಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಮುಖ್ಯ ತಾಂತ್ರಿಕ ಅಧಿಕಾರಿ ಮನೋಹರ್ ಎಸ್.ಕಾನಕತ್ರಿ ಅವರು ನಿರೂಪಿಸಿ, ಸ್ಬಾಗತಿಸಿದ ಕಾರ್ಯಕ್ರಮಕ್ಕೆ ಉಪನ್ಯಾಸಕರಾದ ವಿಠ್ಠಲ ಕಶೀಲ್ಕರ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.