ಜೋಯಿಡಾ:
ತಾಲೂಕಿನ ಖಾಪ್ರಿ(ಕಂಬಳಿ) ಜಾತ್ರೆ ಎಂದೇ ಪ್ರಸಿದ್ಧವಾದ ಬುಡಕಟ್ಟು ಕುಣಬಿ ಜನರ ಗಾವಡೆವಾಡಾದ ಖಾಪ್ರಿ ಜಾತ್ರೆ ಸಾವಿರಾರು ಭಕ್ತರ ಸೇವೆಯೊಂದಿಗೆ ಸಂಪನ್ನಗೊಂಡಿತು. ತಾಲೂಕಿನ ಬುಡಕಟ್ಟು ಕುಣಬಿ ಸಮುದಾಯದ ವಿಶಿಷ್ಟ ಸಂಪ್ರದಾಯ ಗಳೊಂದಿಗೆ ಗುರುವಾರದಂದು ಜಾತ್ರೆ ಅತ್ಯಂತ ಭಕ್ತಿ – ಭಾವಗಳ ಸಂಯೋಗದೊಂದಿಗೆ ನಡೆಯಿತು.ಬುಧವಾರ ತುಳಸಿ ಪೂಜೆಯೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರು ಸೇರಿ ಗುರುವಾರ ಹರಕೆಯ ರೂಪವಾಗಿ ಕಂಬಳಿ ಅರ್ಪಿಸಿ ಪ್ರಸಾದ ಸ್ವೀಕರಿಸುವದರೊಂದಿಗೆ ಸಂಪನ್ನವಾಯಿತು. ಬೆಳಿಗ್ಗೆ 11 ಗಂಟೆಯಿಂದಲೇ ಜನರು ತಂಡೋಪ ತಂಡವಾಗಿ ಬಂದು ಜಾತ್ರೆ ನಡೆಯುವ ಸ್ಥಳ ತುಂಬಿ ಭಕ್ತರು ದೂರದವರೆಗೂ ಸರದಿಯಲ್ಲಿ ನಿಂತು ಸೇವೆ ಸಲ್ಲಿಸಿದರು.ಜಿಲ್ಲೆ,ಹೊರ ಜಿಲ್ಲೆ ನೆರೆಯ ಗೋವಾ,ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ಜಾತ್ರೆಗೆ ಆಗಮಿಸಿದ್ದರು.ಜಾತ್ರೆಯಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳ ಅಂಗಡಿಗಳು,ಆಟಿಕೆ ಅಂಗಡಿಗಳು,ಬಟ್ಟೆ ಅಂಗಡಿಗಳು ಇದ್ದವು. ಜಾತ್ರಾ ಸಮಿತಿಯವರು ಸೂಕ್ತ ವ್ಯವಸ್ಥೆಯನ್ನು ಮಾಡಿದ್ದರು,ಆರಕ್ಷಕ ಇಲಾಖೆಯವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.