
ದಾಂಡೇಲಿ:
ದಾಂಡೇಲಿಯಿಂದ ಐದಾರು ಕಿ.ಮಿ. ರಸ್ತೆ ಪರವಾಗಿಲ್ಲ. ಆದರೆ ಅದರ ಮುಂದೆ ಸಾಗಿದರೆ ಅದು ರಸ್ತೆಯೋ ಅಥವಾ ಇನ್ನೇನೋ ಎಂದು ಭಾವಿಸುವಂತಾಗುತ್ತದೆ. ಬಿದ್ದ ಹೊಂಡಗಳು ಚಿಕ್ಕವಲ್ಲ.ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ಅದೊಂದು ಹರಸಾಹಸ ಮಾಡಬೇಕು.
ದಾಂಡೇಲಿಯಿಂದ ಧಾರವಾಡಕ್ಕೆ ಸರಿಸುಮಾರು 50 ಕಿಲೋಮೀಟರ್. ಹಿಂದೆಲ್ಲ ಈ ರಸ್ತೆಯಲ್ಲಿ ಬಸ್ ಅಥವಾ ಕಾರುಗಳ ಮೇಲೆ ಸಂಚರಿಸಿದರೆ ಅದು ಒಂದು ಗಂಟೆಯ ಪ್ರಯಾಣವಾಗಿತ್ತು. ಆದರೆ ಈಗ ಎರಡು ಗಂಟೆ ಪ್ರಯಾಣಿಸಿದರೂ ತಲುಪಲು ಸಾಧ್ಯವಾಗುತ್ತಿಲ್ಲ. ಹೊಂಡ ತಪ್ಪಿಸುವ ಸರ್ಕಸ್ ಮಾಡಬೇಕು. ಬಸ್ಸಿನ ಮೇಲೆ ಹೋದರೆ ಈ ಹೋಂಡ, ತಗ್ಗುಗಳನ್ನ ಹಾರಿಸಿ ಹೋಗುವಾಗ ಪ್ರಯಾಣಿಕರ ಸೊಂಟ ನೋವು ಗ್ಯಾರಂಟಿ. ಇನ್ನು ಸಣ್ಣ ಕಾರಿನ ಮೇಲೆ ಹೋದರೆ ಕಾರಿನ ಚಕ್ರಗಳು ಹೊಂಡದಲ್ಲಿ ಹುಗಿದು ಬೀಳುವುದು ಖಚಿತ.
ಇನ್ನು ದಾಂಡೇಲಿ ಹಳಿಯಾಳದ ಬಹುತೇಕ ಜನ ತಮ್ಮ ವ್ಯವಹಾರಗಳಿಗೆ ಹೆಚ್ಚಾಗಿ ಅವಲಂಭಿಸಿರುವುದು ಹುಬ್ಬಳ್ಳಿ, ಧಾರವಾಡವನ್ನು ಹಾಗೂ ಆರೋಗ್ಯ ಸಮಸ್ಯೆ ಆದಾಗ ಹೆಚ್ಚಿನ ಚಿಕಿತ್ಸೆಗೆ ಹೋಗುವುದು ಹುಬ್ಬಳ್ಳಿ ಧಾರವಾಡಕ್ಕೆ. ಹಾಗೆ ಆರೋಗ್ಯ ಕೆಟ್ಟು ಧಾರವಾಡ ಹೋಗಿಬೇಕೆಂದರೆ ಈ ರಸ್ತೆಯಲ್ಲಿ ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತದೆ.
ಶಾಸಕರು ರಾಜಕಾರಣಿಗಳು ಇ ಭಾಗಕ್ಕೆ ಪ್ರವಾಸ ಕೈಗೊಳ್ಳುವ ಮುಂಚಿತ ದಿನ ಅವರಿಗೆ ಪ್ರಯಾಣದಲ್ಲಿ ಯಾವುದೆ ರೀತಿಯ ತೊಂದರೆ ಆಗಬಾರದು ಹಾಗೂ ರಸ್ತೆ ಗುಂಡಿಗಳು ಸಮಸ್ಯೆಯಾಗಬಾರದು ಎಂದು ತಾತ್ಕಾಲಿಕವಾಗಿ ಗುತ್ತಿಗೆದಾರರು ರಸ್ತೆಯಲ್ಲಿರುವ ಗುಂಡಿಯನ್ನು ಮಣ್ಣಿನಿಂದ ಮುಚ್ಚುತ್ತಾರೆ.ಎರಡು ದಿನಗಳ ನಂತರ ಮತ್ತೆ ಅದೇ ಪರಿಸ್ಥಿತಿ.ಇವರಿಗೆ ಸಾಮಾನ್ಯ ಜನರ ಸಮಸ್ಯೆ ಕಾಣುವುದಿಲ್ಲವೆ? ಎಂದು ಪ್ರಯಾಣಿಕರು ಪ್ರಶ್ನಿಸುತ್ತಾರೆ.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ದಾಂಡೇಯಿಂದ ಧಾರವಾಡದವರೆಗಿನ ರಸ್ತೆಯನ್ನು ಶೀಘ್ರವಾಗಿ ದುರಸ್ತಿ ಪಡಿಸಬೇಕಾದ ಅಗತ್ಯವಿದ್ದು, ಒಂದೊಮ್ಮೆ ಈ ರಸ್ತೆ ರಿಪೇರಿ ಆಗದೆ ಇದ್ದಲ್ಲಿ ಜನ ಬೀದಿಗಿಳಿದು ಹೋರಾಟ ನಡೆಸುವ ಸಿದ್ಧತೆ ನಡೆಸುತ್ತಿದ್ದಾರೆ.