
ದಾಂಡೇಲಿ :
ಇದೇ ನವಂಬರ್ 23ರಂದು ದಾಂಡೇಲಿಯ ಹಾರ್ನಬಿಲ್ ಸಭಾಭವನದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ನೀವು ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ನೀವು ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷೆ ಯಮುನಾ ಗಾಂವಕರ ಅಭಿವೃದ್ಧಿಯ ಸ್ಪಷ್ಟ ಪರ್ಯಾಯ ಧೋರಣೆ ಮತ್ತು ಪ್ರಾಯೋಗಿಕ ಅರಿವಿನೊಂದಿಗೆ ನಮ್ಮ ಜಿಲ್ಲೆಯ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗೆ ಸಂಘಟಿತ ಜನ ಚಳುವಳಿಯ ಮೂಲಕ ಶ್ರಮಿಸಲು ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ನವೆಂಬರ್ 23 ರಂದು ದಾಂಡೇಲಿಯ ಹಾರ್ನಬಿಲ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶವನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರಾದ ಡಾ.ಎಂ.ಚಂದ್ರ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಶಾಸಕರು, ಉಸ್ತುವಾರಿ ಸಚಿವರು ,ಮುಖಂಡರು ,ಜನ ಪ್ರತಿನಿಧಿಗಳು ಹಾಗೂ ಸಾಮಾಜಿಕ ಚಿಂತಕರಾದ ಮೀನಾಕ್ಷಿ ಸುಂದರಂ, ನಗರ ಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಭಾಗವಹಿಸಲಿದ್ದಾರೆ. ಈ ಸಮಾವೇಶದ ಯಶಸ್ಸಿಗೆ ಸರ್ವರು ಸಹಕರಿಸುವಂತೆ ವಿನಂತಿಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಡಿ.ಸ್ಯಾಮಸನ್ ಅವರು ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಆಶಯವನ್ನು ಹೊತ್ತಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ವಿಚಾರಧಾರೆಗಳ ಕೈಪಿಡಿ ಒಂದನ್ನು ಮುದ್ರಿಸಿ, ಸರಕಾರಕ್ಕೆ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಾವೇಶದ ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಕೀರ್ತಿ ಗಾಂವಕರ, ಟಿ.ಎಸ್. ಬಾಲಮಣಿ, ಸಮಿತಿಯ ಗೌರವ ಸದಸ್ಯರಾದ ಮೌಲಾಲಿ ಮುಲ್ಲಾ ,ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾದ ರತ್ನದೀಪಾ ಎನ್.ಎಂ, ಇಮ್ರಾನ್ ಖಾನ್, ಕಾಂತರಾವ್ ಜಾನಾ ಮೊದಲಾದವರು ಉಪಸ್ಥಿತರಿದ್ದರು.