
ದಾಂಡೇಲಿ :
ನಗರದ ಅಂಬೇವಾಡಿಯಲ್ಲಿ ಸೇಂಟ್ ಜೋಸೆಫ್ ವರ್ಕರ್ ಚರ್ಚಿನಲ್ಲಿ ಸಂಭ್ರಮ ಸಡಗರದಿಂದ ರಜತ ಮಹೋತ್ಸವ ಕಾರ್ಯಕ್ರಮವು ಇಂದು ಬುಧವಾರ ಮಧ್ಯಾನ 12 ಗಂಟೆ ಸುಮಾರಿಗೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರವಾರದ ಬಿಷಪ್ ರೆವೆರೆಂಡ್ ಫಾದರ್ ಡಾ.ಡುಮ್ಮಿಂಗ್ ಡಯಾಸ್ ಅವರು ಕ್ರೈಸ್ತ ಧರ್ಮ ಬಾಂಧವರಿಗೆ ಶಾಂತಿ ಸಮಾಧಾನವನ್ನು ತಂದುಕೊಡುವ ಮಹತ್ವಪೂರ್ಣವಾದ ಆಲಯವೇ ಕ್ರೈಸ್ತ ಮಂದಿರ. ಇಲ್ಲಿಯ ಚರ್ಚ್ ಪ್ರಾರಂಭಗೊಂಡು 25 ವರ್ಷಗಳ ಈ ಸಂಭ್ರಮದಲ್ಲಿ ನಾವೆಲ್ಲ ಸಂತೋಷದಿಂದ ಭಾಗಿಯಾಗಿದ್ದೇವೆ. ಈ ಸುಸಂದರ್ಭದಲ್ಲಿ ಚರ್ಚಿನ ನಿರ್ಮಾಣಕ್ಕೆ ಶ್ರಮಿಸಿದ ಮತ್ತು ಸಹಕರಿಸಿದ ಮಹನೀಯರನ್ನು ಸ್ಮರಿಸಿಕೊಳ್ಳಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಫಾದರ್ ರೈಮಂಡ್ ಫರ್ನಾಂಡಿಸ್, ಫಾದರ್ ಲಾರೆನ್ ಪಿರೇರಾ, ಸೇಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಸೆಲ್ವಿ ಭಾಗವಹಿಸಿ ರಜತ ಮಹೋತ್ಸವದ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚರ್ಚಿನ ಧರ್ಮ ಗುರುಗಳಾದ ಫಾದರ್ ಸಂತೋಷ ನೊರೋನ್ಹಾ ಅವರು ರಜತ ಮಹೋತ್ಸವದ ಸಂಭ್ರಮದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ. ಈ ಚರ್ಚಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಹಾಗೂ ಚರ್ಚಿನ ಪ್ರಗತಿಗೆ ಅತ್ಯಂತ ಪ್ರೀತಿ ಗೌರವದಿಂದ ಸಹಕಾರವನ್ನು ಮಾಡುತ್ತಾ ಬಂದಿರುವುದರಿಂದ ಇಂದು ಈ ಚರ್ಚ್ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಪರಸ್ಪರ ಶಾಂತಿ -ಸೌಹಾರ್ದತೆಯ ಜೀವನ ಸಂದೇಶವನ್ನು ಜೀವನದಲ್ಲಿ ಪಾಲಿಸುವಂತೆ ಕರೆ ನೀಡಿದರು.
ಸೇಂಟ್ ಜೋಸೆಫ್ ವರ್ಕರ್ ಚರ್ಚಿನ ಪ್ರಧಾನ ಕಾರ್ಯದರ್ಶಿ ಜಾನ್ಸನ್ ರೋಡರಿಗಸ್ ಅವರು ವರದಿಯನ್ನು ಮಂಡಿಸಿ, ಈ ಚರ್ಚಿನ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ಮುಂದೆಯೂ ಇದೇ ರೀತಿ ಸರ್ವರ ಸಹಕಾರವಿರಲಿ ಎಂದು ವಿನಂತಿಸಿದರು.
ಫಾದರ್ ಸ್ಟೀವನ್ ಸ್ವಾಗತ ಕಾರ್ಯಕ್ರಮಕ್ಕೆ ಶಿಕ್ಷಕಿ ಸೋನಿಯಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಸೇಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.